ಉದಯವಾಹಿನಿ, ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿನಿಂದ (ಡಿಸೆಂಬರ್ 15) ಡಿಸೆಂಬರ್ 18ರವರೆಗೆ ವಿದೇಶ ಪ್ರವಾಸ ದಲ್ಲಿರಲಿದ್ದಾರೆ. ಈ ಬಾರಿ ಜೋರ್ಡಾನ್ , ಇಥಿಯೋಪಿಯಾ ಮತ್ತು ಒಮಾನ್ ಗೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಪ್ರವಾಸದ ಪ್ರಮುಖ ಗುರಿ. ಅದರಲ್ಲೂ ವಿಶೇಷವಾಗಿ ವ್ಯಾಪಾರ, ರಕ್ಷಣಾ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ತಮ್ಮ ಪ್ರಯಾಣ ಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಜೋರ್ಡಾನ್‌ನ ಹಾಶಿಮೈಟ್ ಸಾಮ್ರಾಜ್ಯ, ಫೆಡರಲ್ ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಹಾಗೂ ಒಮಾನ್‌ನ ಸಲ್ತಾನೇಟ್- ಈ ಮೂರು ರಾಷ್ಟ್ರಗಳ ಪ್ರವಾಸಕ್ಕೆ ನಾನು ಹೊರಟಿದ್ದೇನೆ. ಈ ದೇಶಗಳೊಂದಿಗೆ ಭಾರತಕ್ಕೆ ಶತಮಾನಗಳ ನಾಗರಿಕ ಸಂಬಂಧಗಳ ಜತೆಗೆ ಬಲವಾದ ಸಮಕಾಲೀನ ದ್ವಿಪಕ್ಷೀಯ ಸಹಕಾರವೂ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮೊದಲು ಜೋರ್ಡಾನ್‌ಗೆ ಭೇಟಿ ನೀಡಲಿದ್ದು, ರಾಜ ಅಬ್ದುಲ್ಲ ದ್ವಿತೀಯ ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಮೋದಿ ಈ ರಾಷ್ಟ್ರಕ್ಕೆ ತೆರಳುತ್ತಿದ್ದಾರೆ. “ಈ ಐತಿಹಾಸಿಕ ಭೇಟಿ ಭಾರತ–ಜೋರ್ಡಾನ್ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆʼʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಮೋದಿ ಜೋರ್ಡಾನ್‌ನಲ್ಲಿ ರಾಜ ಅಬ್ದುಲ್ಲಾ II, ಪ್ರಧಾನ ಮಂತ್ರಿ ಜಾಫರ್ ಹಸನ್ ಹಾಗೂ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ.
