ಉದಯವಾಹಿನಿ, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಜನಪ್ರಿಯ ಬೊಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಮಾರಕ ಗುಂಡಿನ ದಾಳಿಯ ಸಂದರ್ಭದಲ್ಲಿ ದಿಟ್ಟತನ ತೋರಿದ ವ್ಯಕ್ತಿಯೋರ್ವ ಬಂದೂಕುಧಾರಿಯೊಬ್ಬನನ್ನು ನಿಶ್ಯಸ್ತ್ರಗೊಳಿಸುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯನ್ನು ಜೀವಗಳನ್ನು ಉಳಿಸಿದ ನಾಯಕ ಎಂದು ಪ್ರಶಂಸೆಯ ಸುರಿಮಳೆಗರೆಯಲಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ತುಣುಕಿನಲ್ಲಿ, ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ದಾರಿಹೋಕನೊಬ್ಬ ನಿಂತಿದ್ದ ಕಾರಿನ ಹಿಂದೆ ಅಡಗಿ ಕುಳಿತಿದ್ದು, ಬಳಿಕ ಬಂದೂಕುಧಾರಿಯ ಹಿಂದೆ ಧಾವಿಸಿ, ಆತನನ್ನು ಹಿಡಿದುಕೊಂಡಿದ್ದಾನೆ. ನಂತರ ಸಾಹಸ ಮೆರೆದು ದುಷ್ಕರ್ಮಿಯ ಕೈಯಿಂದ ಬಂದೂಕನ್ನು ಕಿತ್ತುಕೊಂಡಿದ್ದಾನೆ. ಆಯುಧವನ್ನು ಬಂದೂಕುಧಾರಿಯ ಕಡೆಗೆ ಗುರಿಯಾಗಿಸಿ ಹಿಡಿದು, ಆತನನ್ನು ಶರಣಾಗುವಂತೆ ಮಾಡಿದ್ದಾನೆ. ವ್ಯಕ್ತಿಯ ಸಾಹಸಕ್ಕೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಅನೇಕ ಗಣ್ಯರು, ನೆಟ್ಟಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಕ್ರಿಸ್ ಮಿನ್ಸ್ ಇದನ್ನು ‘ಅತ್ಯಂತ ನಂಬಲಸಾಧ್ಯವಾದ ದೃಶ್ಯ’ ಎಂದು ಬಿಂಬಿಸಿದ್ದಾರೆ.
ಜನ ಸಮುದಾಯದ ಮೇಲೆ ಗುಂಡು ಹಾರಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ನಿಶ್ಯಸ್ತ್ರಗೊಳಿಸಿ, ಅಸಂಖ್ಯಾತ ಜನರ ಜೀವಗಳನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಆತ ವ್ಯಕ್ತಿ ನಿಜವಾದ ಹೀರೋ’ ಎಂದು ಮಿನ್ಸ್ ಬಣ್ಣಿಸಿದ್ದಾರೆ.
