ಉದಯವಾಹಿನಿ, ಅಬುಧಾಬಿ, : ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಫ್ರಾಂಚೈಸಿಗಳ ಮಾಲಿಕರು ಅಬುಧಾಬಿ ತಲುಪಿದ್ದು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಮುಂಬೈ ಮೂಲದ ಮಲ್ಲಿಕಾ ಸಾಗರ್ ಹರಾಜುಗಾರ್ತಿಯಾಗಿದ್ದಾರೆ.
ಮುಂಬೈ ಮೂಲದ 50 ವರ್ಷದ ಮಲ್ಲಿಕಾ ಸಾಗರ್ ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಜಗತ್ತಿನ ಶ್ರೇಷ್ಠ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯಾಗಿದ್ದಾರೆ. ಮಲ್ಲಿಕಾ ಸಾಗರ್ ಅವರಿಗೆ ಇದು ಮೊದಲ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲ. ಸತತ ಮೂರನೇ ಬಾರಿಗೆ ಐಪಿಎಲ್ ಹರಾಜನ್ನು ಅವರು ಮುನ್ನಡೆಸುತ್ತಿದ್ದಾರೆ.
2023 ರಲ್ಲಿ ದುಬೈನಲ್ಲಿ ಮಿನಿ-ಹರಾಜನ್ನು ನಡೆಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹರಾಜುದಾರರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಾಗರ್ ಪಾತ್ರರಾದರು. ನಂತರ ಅವರು 2024 ರ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜನ್ನು ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೀಗ ಮೂರನೇ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
