ಉದಯವಾಹಿನಿ, ಗಿರ್ ಸೋಮನಾಥ(ಗುಜರಾತ್): ಹಿಂದೂ ಧಾರ್ಮಿಕ ಶ್ರೇಷ್ಠತೆಯ ದೇಶದ ಮೊದಲ ಜ್ಯೋತಿರ್ಲಿಂಗ ಪ್ರಸಿದ್ಧಿಯ ಶ್ರೀ ಸೋಮನಾಥ ದೇವಾಲಯಕ್ಕೆ ಇಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಭೇಟಿ ನೀಡಿದರು. ದೇವಾಲಯದಲ್ಲಿ ವೇದ ಮಂತ್ರಗಳ ಪಠಣದ ಮಧ್ಯೆ ಅನಂತ್ ಅಂಬಾನಿ ಅವರು ಮಹಾಪೂಜೆ ಮತ್ತು ಜಲಾಭಿಷೇಕ ನೆರವೇರಿಸಿದರು.
ಮುಖ್ಯ ದೇವಾಲಯದಲ್ಲಿ ಸೋಮನಾಥನ ಪಾದಗಳಿಗೆ ನಮಿಸಿದ ನಂತರ ಅನಂತ್, ಸಮುದ್ರ ತೀರಕ್ಕೆ ತೆರಳಿದರು. ಅಲ್ಲಿ ಸೂರ್ಯನಾರಾಯಣನ ದರ್ಶನ ಪಡೆಯುವ ಜೊತೆಗೆ ಪ್ರಕೃತಿಯ ದೈವಿಕ ಶಾಂತಿಯನ್ನು ಅನುಭವಿಸಿದರು. ಕಪರ್ಡಿ ಗಣೇಶ್ ದೇವಸ್ಥಾನಕ್ಕೂ ಭೇಟಿ ನೀಡಿ, ಅಡೆತಡೆಗಳನ್ನು ನಿವಾರಿಸುವಂತೆ ಪ್ರಾರ್ಥಿಸಿದರು. ದೇವಾಲಯಕ್ಕೆ 5 ಕೋಟಿ ರೂ ದೇಣಿಗೆ: ಶ್ರೀ ಸೋಮನಾಥ ದೇವಾಲಯಕ್ಕೆ ಅನಂತ್ ಅಂಬಾನಿ ₹5 ಕೋಟಿ ದೇಣಿಗೆ ನೀಡಿದ್ದಾರೆ. ಯಾತ್ರಾರ್ಥಿಗಳಿಗೆ ಆಧುನಿಕ ಸೌಲಭ್ಯಗಳು, ಅಭಿವೃದ್ಧಿ ಯೋಜನೆಗಳು ಮತ್ತು ದೇವಾಲಯದ ಒಟ್ಟಾರೆ ಅಭಿವೃದ್ಧಿಗಾಗಿ ಈ ದೇಣಿಗೆ ಬಳಕೆಯಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಇದಕ್ಕೂ ಮುನ್ನ ದೇವಾಲಯ ಟ್ರಸ್ಟ್‌ನ ಜನರಲ್ ಮ್ಯಾನೇಜರ್ ವಿಜಯ್ ಸಿಂಗ್ ಚಾವ್ಡಾ ಅವರು ಅಂಬಾನಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸೋಮನಾಥನ ಚಿತ್ರ ಮತ್ತು ಪವಿತ್ರ ಕಾಣಿಕೆಗಳನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಗೆಳೆಯ ಶಿಖರ್ ಪಹರಿಯಾ ಕೂಡ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸೋಮನಾಥ ದೇವಾಲಯದ ವಿಶೇಷತೆಗಳು: ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯವು ಶಿವನ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಮೊದಲನೇಯದು. ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಈ ದೇವಾಲಯ ಕೂಡ ಒಂದು. ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿರುವ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
