ಉದಯವಾಹಿನಿ, ನಯಾಗಢ (ಒಡಿಶಾ): ವೃದ್ಧ ಪೋಷಕರನ್ನು ಮಕ್ಕಳು ಬೀದಿಗೆ ಬಿಸಾಡುವ, ವೃದ್ಧಾಶ್ರಮಕ್ಕೆ ಸೇರಿಸುವ ಕೆಲವು ಘಟನೆಗಳು ಸಮಾಜದಲ್ಲಿವೆ. ಆದರೆ, ಇಲ್ಲೊಬ್ಬ ಯೂಟ್ಯೂಬರ್​ ತನ್ನ ಹೆತ್ತವರ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ತನ್ನೂರಿನಿಂದ ಪುರಿಯ ಜಗನ್ನಾಥನ ದೇವಾಲಯಕ್ಕೆ ದೀರ್ಘದಂಡ ನಮಸ್ಕಾರ ಹಾಕುತ್ತಾ ತೀರ್ಥಯಾತ್ರೆ ನಡೆಸುತ್ತಿದ್ದಾರೆ. ನಯಾಗಢದ ಗೋಪಾಲಪುರ ಗ್ರಾಮದ ನಿವಾಸಿ ಸುಶೀಲ್ ಎಂಬುವರು ತನ್ನ ತಂದೆ-ತಾಯಿಯ ಸಂತೋಷ, ತ್ಯಾಗಗಳನ್ನು ಗೌರವಿಸಲು ಮತ್ತು ಅವರ ಬಹುಕಾಲದ ಆಸೆಯನ್ನು ಪೂರೈಸಲು ತನ್ನ ಊರಿನಿಂದ ಪುರಿಗೆ ದೀಡ್​ ನಮಸ್ಕಾರ ಹಾಕುತ್ತಿದ್ದಾರೆ.

ಯೂಟ್ಯೂಬರ್​ ಆಗಿರುವ ಸುಶೀಲ್​, ಮಕ್ಕಳು ಮತ್ತು ಪೋಷಕರ ಸಂಬಂಧದ ಬಗ್ಗೆ ವಿಡಿಯೋಗಳನ್ನು ರಚಿಸುತ್ತಾರೆ. ಪೋಷಕರು ನನ್ನ ಸಣ್ಣ ಆಸೆಗಳನ್ನು ಪೂರೈಸಲು ಮಾಡಿದ ತ್ಯಾಗಗಳನ್ನು ನೋಡಿದ್ದೇನೆ. ತಂದೆ ಸುರೇಂದ್ರ ಬರಾದ್ ಅವರು ಪುರಿಗೆ ಕಾಲ್ನಡಿಗೆ ಮಾಡಬೇಕು ಎಂದು ನಿರ್ಧರಿಸಿದ್ದರು. ಆದರೆ ಅದನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಾನೇ ತಂದೆಯ ಆಸೆಯನ್ನು ಪೂರೈಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ಹೆತ್ತವರಿಗಾಗಿ ಈ ಕಾರ್ಯ: ನಯಾಗಢದಲ್ಲಿನ ಜಗನ್ನಾಥ ದೇವಸ್ಥಾನ ಮತ್ತು ಸುಕ್ಕಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ದೀರ್ಘದಂಡ ನಮಸ್ಕಾರದ ವೇಳೆ ಮೊಣಕಾಲು ಮತ್ತು ಕೈಗಳಿಗೆ ರಕ್ಷಣೆಯಾಗಿ ಐದು ಅಡಿ ಉದ್ದದ ಪ್ಲಾಸ್ಟಿಕ್​ ಅನ್ನು ಬಳಸುತ್ತಿದ್ದಾರೆ. ಖುರ್ದಾ, ಜತ್ನಿ ಮತ್ತು ಪಿಪಿಲಿ ಮೂಲಕ ಪುರಿಗೆ ತಲುಪಲು ಯೋಜಿಸಿದ್ದಾರೆ. ಹಲವು ದಿನಗಳ ಈ ಪ್ರಯಾಣದಲ್ಲಿ ಹಸಿದಾಗ ಆಹಾರ ಸೇವಿಸಿ, ವಿಶ್ರಾಂತಿ ಪಡೆದು ಮತ್ತೆ ಸಾಗುತ್ತಿದ್ದಾರೆ.
ಇದು ಸವಾಲಿನದ್ದಾಗಿದ್ದರೂ, ದೀರ್ಘದಂಡ ನಮಸ್ಕಾರದ ಮೂಲಕ ದೇವಸ್ಥಾನಕ್ಕೆ ತೆರಳುವ ನಿರ್ಧಾರದಲ್ಲಿ ದೃಢವಾಗಿದ್ದೇನೆ. ನನ್ನ ಹೆತ್ತವರ ಸಂತೋಷಕ್ಕಾಗಿ ದೇವರ ಆಶೀರ್ವಾದವನ್ನು ಪಡೆಯಲು ನಾನು ಈ ಪ್ರಯಾಣ ಕೈಗೊಂಡಿದ್ದೇನೆ. ಪುರಿಯನ್ನು ತಲುಪಿದ ನಂತರ, ಜಗನ್ನಾಥನ ದರ್ಶನ ಪಡೆದು ಹೆತ್ತವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆ. ಅವರು ಆರೋಗ್ಯ ಮತ್ತು ಸಂತೋಷವಾಗಿರಬೇಕೆಂದು ನನ್ನ ಬಯಕೆ. ಅವರು ನನ್ನನ್ನು ಬೆಳೆಸಲು ಹೆಣಗಾಡಿದ್ದನ್ನು ಕಂಡಿದ್ದೇನೆ. ಈಗ ಅವರನ್ನು ಸಂತೋಷವಾಗಿಡುವುದು ನನ್ನ ಜವಾಬ್ದಾರಿ. ಈ ಪ್ರಯಾಣ ಎಷ್ಟೇ ಕಷ್ಟಕರವಾಗಿದ್ದರೂ ಅದನ್ನು ಪೂರ್ಣಗೊಳಿಸುತ್ತೇನೆ ಎಂದು ಸುಶೀಲ್​ ಹೇಳಿದರು.

Leave a Reply

Your email address will not be published. Required fields are marked *

error: Content is protected !!