ಉದಯವಾಹಿನಿ, ಎಲ್ಲರ ಗಮನವನ್ನು ಸೆಳೆಯಲು ಹಾಗೂ ಸದಾ ಸುದ್ದಿಯಲ್ಲಿರಲು ಭಾರತ ತಂಡವನ್ನು ಟೀಕಿಸುತ್ತಿದ್ದಾರೆಂದಿದ್ದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ಗೆ ಇದೀಗ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ ತಿರುಗೇಟು ನೀಡಿದ್ದಾರೆ. ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸುವುದಿಲ್ಲ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಸ್ಲಾಗರ್ ಎಂದು ಕರೆದಿದ್ದ ಬಳಿಕ ಆಮಿರ್ ಹಾಗೂ ಕೈಫ್ ನಡುವೆ ಮಾತಿನ ಸಮರ ಶುರುವಾಗಿತ್ತು. ಅಂದ ಹಾಗೆ ಆಮಿರ್ ಭವಿಷ್ಯಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸುಳ್ಳಾದವು. ಭಾರತ ತಂಡ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ ಹಾಗೂ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಮೂರನೇ ಚುಟಕು ವಿಶ್ವಕಪ್‌ಗಾಗಿ ಕಾದಾಟ ನಡೆಸಲಿದೆ.
ನಂತರ ಮೊಹಮ್ಮದ್ ಕೈಫ್, ಆಮಿರ್ ಭಾರತದ ಬಗ್ಗೆ ಅಥವಾ ಕ್ರಿಕೆಟ್ ಕುರಿತು ನೀಡುವ ಅಭಿಪ್ರಾಯಗಳಿಗೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಅವು ನಿಜವಾದ ವಿಶ್ಲೇಷಣೆಯಿಂದ ಬಂದವುಗಳಲ್ಲ ಎಂದು ಅವರು ಸೂಚಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಆಮಿರ್, ಟಿ20 ಕ್ರಿಕೆಟ್‌ನಲ್ಲಿ ಕೈಫ್‌ಗಿಂತ ತಮಗೆ ಹೆಚ್ಚು ಅನುಭವವಿದೆ ಎಂದು ಹೇಳಿದ್ದಾರೆ. ಜೊತೆಗೆ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ತಾವು ಭಾರತದ ಬಗ್ಗೆ ಮಾತನಾಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
