ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರನ್ನು ಮತಾಂಧ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಪೈಕಿ ಓರ್ವ ಪತ್ರಕರ್ತ ಹಾಗು ಉದ್ಯಮಿಯಾದರೆ ಮತ್ತೊಬ್ಬರು ದಿನಸಿ ಅಂಗಡಿ ಮಾಲೀಕ ಎಂದು ತಿಳಿದು ಬಂದಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಜೆಸೋರ್‌ನ ಮೋನಿರಾಂಪುರ್ ಪ್ರದೇಶದಲ್ಲಿ ಐಸ್ ಕಾರ್ಖಾನೆಯ ಮಾಲೀಕ ರಾಣಾ ಪ್ರತಾಪ್ ಬೈರಾಗಿ ಎಂಬವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೋನಿರಾಂಪುರದ ಕಪಾಲಿಯಾ ಬಜಾರ್‌ನಲ್ಲಿ ಐಸ್ ತಯಾರಿಕಾ ಕಾರ್ಖಾನೆಯನ್ನೂ ಇವರು ಹೊಂದಿದ್ದು, ನರೈಲ್‌ನಿಂದ ಪ್ರಕಟವಾಗುವ ‘ದೈನಿಕ್ ಬಿಡಿ ಖೋಬೋರ್’ ಪತ್ರಿಕೆಯ ಹಂಗಾಮಿ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದರು.ಮೋಟಾರ್ಬೈಕ್ನಲ್ಲಿ ಬಂದ ಮೂವರು ದಾಳಿಕೋರರು ಐಸ್ ಫ್ಯಾಕ್ಟರಿಯಿಂದ ಅವರನ್ನು ಕೂಗಿ ಹೊರ ಕರೆದಿದ್ದಾರೆ. ನಂತರ ತಲೆಗೆ ಹತ್ತಿರದಿಂದಲೇ ಗನ್ ಇಟ್ಟು ಶೂಟ್ ಮಾಡಿ ಪರಾರಿಯಾಗಿದ್ದಾರೆ. ರಾಣಾ ಪ್ರತಾಪ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆಂದು ವರದಿ ತಿಳಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೋನಿರಾಂಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಒಸಿ) ಎಂಡಿ ರಜಿಯುಲ್ಲಾ ಖಾನ್ ತಿಳಿಸಿದ್ದಾರೆ. ಕೊಲೆಗೆ ನಿರ್ದಿಷ್ಟ ಕಾರಣ ತಿಳಿದಿಲ್ಲ, ತನಿಖೆ ಸಾಗಿದೆ ಎಂದು ಹೇಳಿದ್ದಾರೆ.
ದಿನಸಿ ವ್ಯಾಪಾರಿಯ ಹತ್ಯೆ: ಅದೇ ರೀತಿ, ಸೋಮವಾರ ರಾತ್ರಿ ನರ್ಸಿಂಗ್ಡಿ ಎಂಬಲ್ಲಿ ಶರತ್ ಚಕ್ರವರ್ತಿ ಮಣಿ(40) ಎಂಬ ದಿನಸಿ ವ್ಯಾಪಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಲ್ಲೆ ನಡೆಯುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಸಮುದಾಯವನ್ನು ಅಭದ್ರತೆ ಕಾಡುತ್ತಿದೆ ಎಂಬ ಕುರಿತು ಕಳೆದ ಕೆಲವು ವಾರಗಳಿಂದ ವರದಿಯಾಗುತ್ತಿದೆ.
ಹೊಸ ವರ್ಷದ ಹಿಂದಿನ ಸಂಜೆ ಹಿಂದೂ ವ್ಯಕ್ತಿ ಖೊಕೊನ್ ದಾಸ್ ಎಂಬವರನ್ನು ದುಷ್ಕರ್ಮಿಗಳು ಹರಿತ ಆಯುಧದಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಗಂಭೀರ ಸುಟ್ಟುಗಾಯಗಳಿಂದ ಅವರು ಸಾವನ್ನಪ್ಪಿದ್ದು, ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು.
ದಾಸ್ ತಮ್ಮನ್ನು ತಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ರಸ್ತೆ ಪಕ್ಕದಲ್ಲಿದ್ದ ಹತ್ತಿರದ ಕೊಳಕ್ಕೆ ಹಾರಿದ್ದರು. ಅವರ ಕಿರುಚಾಟ ಕೇಳಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿತ್ತಿದ್ದಂತೆ ದಾಳಿಕೋರರು ಓಡಿಹೋಗಿದ್ದರು. ನಂತರ ಸ್ಥಳೀಯರು ರಕ್ಷಿಸಿ, ಆರಂಭದಲ್ಲಿ ಶರಿಯತ್‌ಪುರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆರೋಗ್ಯ ಬಿಗಾಡಾಯಿಸಿ, ರಾತ್ರಿ ಢಾಕಾದ ಆಸ್ಪತ್ರೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
