ಉದಯವಾಹಿನಿ, ಸಿಂಗಾಪುರ: ಖ್ಯಾತ ಅಸ್ಸಾಮಿ ಗಾಯಕ ಮತ್ತು ಸಂಯೋಜಕ ಜುಬೀನ್ ಗಾರ್ಗ್ ಅವರ ಸಾವು ಕೊಲೆಯಲ್ಲ ಎಂದು ಸಿಂಗಾಪುರ ಪೊಲೀಸರು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಗಾಯಕ ಜುಬೀನ್ ಗಾರ್ಗ್ ಸಾವಿನ ಪ್ರಕರಣದ ತನಿಖೆ ನಡೆಸಿದ ಸಿಂಗಾಪುರ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಘಟನೆಯ ಕುರಿತು ವರದಿಯನ್ನು ಬುಧವಾರ ಮಂಡಿಸಿದ್ದು ಈ ವರದಿಯಲ್ಲಿ ಗಾಯಕನ ಸಾವು ಕೊಲೆಯಲ್ಲ ಬದಲಾಗಿ ಅದೊಂದು ಆಕಸ್ಮಿಕ ಸಾವು ಎಂದು ವರದಿ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆಯಲಿದ್ದ ‘ಈಶಾನ್ಯ ಭಾರತ ಉತ್ಸವ’ದಲ್ಲಿ ಭಾಗವಹಿಸಲು ಜುಬೀನ್ ಗಾರ್ಗ್ ಆಗಮಿಸಿದ್ದರು. ಕಾರ್ಯಕ್ರಮದ ಹಿಂದಿನ ದಿನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಈಜಲು ತೆರಳಿ ಉಸಿರುಗಟ್ಟಿ ಈ ದುರ್ಘಟನೆ ಸಂಭವಿಸಿತ್ತು. ಈ ಕುರಿತು ಸಿಂಗಾಪುರ ತನಿಖಾಧಿಕಾರಿಗಳು ತನಿಖೆಯನ್ನು ನಡೆಸಿದ್ದು ಅದರಂತೆ ನ್ಯಾಯಾಲಯಕ್ಕೆ ತಮ್ಮ ವರದಿಯನ್ನು ಮಂಡಿಸಿದ್ದಾರೆ ಅದರಲ್ಲಿರುವ ಪ್ರಮುಖ ಅಂಶಗಳೆಂದರೆ.
ಈಜು ಆರಂಭಿಸಿದ ಮೊದಲು ಜುಬೀನ್ ಲೈಫ್ ಜಾಕೆಟ್ ಧರಿಸಿದ್ದರು, ಆದರೆ ನಂತರ ಅದನ್ನು ತೆಗೆದಿದ್ದರು. ಎರಡನೇ ಬಾರಿ ಈಜಲು ಮುಂದಾದಾಗ ಚಿಕ್ಕ ಗಾತ್ರದ ಲೈಫ್ ಜಾಕೆಟ್ ನೀಡಲಾದರೂ ಅವರು ಅದನ್ನು ಧರಿಸಲು ನಿರಾಕರಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಜುಬೀನ್ ಅವರ ರಕ್ತದಲ್ಲಿ 333 ಮಿಲಿ ಗ್ರಾಂನಷ್ಟು ಮದ್ಯದ ಅಂಶ ಪತ್ತೆಯಾಗಿದೆ. ಇದರಿಂದಾಗಿ ಅವರು ಈಜಲು ತೆರಳುವ ಸಮಯದಲ್ಲಿ ಅಮಲಿನಲ್ಲಿ ಇದ್ದರು ಎನ್ನಲಾಗಿದೆ ಅಲ್ಲದೆ ಈ ಸಮಯದಲ್ಲಿ ಸಮುದ್ರದಲ್ಲಿ ಈಜಲು ತೆರಳಿರುದ್ದರಿಂದ ಅವರು ಈಜುವ ಸಾಮರ್ಥ್ಯ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ. ಅಷ್ಟು ಮಾತ್ರವಲ್ಲದೆ ಜುಬೀನ್ ಅವರಿಗೆ ರಕ್ತದೊತ್ತಡ ಮತ್ತು ಅಪಸ್ಮಾರ ಕಾಯಿಲೆ ಕೂಡಾ ಇತ್ತು. ಆದರೆ ಸಾವಿನ ಸಂದರ್ಭದಲ್ಲಿ ಅವರಿಗೆ ಫಿಟ್ಸ್ ಬಂದಿತ್ತೇ ಎಂಬುದು ದೃಢಪಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಘಟನೆ ನಡೆದ ದಿನ ಬೋಟ್ ಸಿಬ್ಬಂದಿಗಳು ನೀಡಿದ ಮಾಹಿತಿ ಪ್ರಕಾರ ಗಾಯಕ ಬೋಟ್ ಹತ್ತುವ ಮೊದಲೇ ಅಸ್ವಸ್ಥರಾದಂತೆ ಕಾಣುತ್ತಿದ್ದರು ಅವರ ಸ್ನೇಹಿತರೆ ಅವರನ್ನು ಹಿಡಿದುಕೊಂಡು ಬಂದಿದ್ದಾರೆ ಅಲ್ಲದೆ ಈ ಸಮಯದಲ್ಲಿ ನೀರಿಗಿಳಿಯುವುದು ಅಪಾಯಕಾರಿ ಎಂದು ಹೇಳಿದ್ದರೂ ಜಾಕೆಟ್ ಇಲ್ಲದೆ ನೀರಿಗಿಳಿಯಲು ಮುಂದಾಗಿದ್ದಾರೆ ಈ ಕುರಿತು ಗಾರ್ಗ್ ಅವರ ಗೆಳೆಯರನ್ನೂ ಎಚ್ಚರಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಸಿಂಗಾಪುರ ಪೊಲೀಸರು ಇದರಲ್ಲಿ ಯಾವುದೇ ಕ್ರಿಮಿನಲ್ ಸಂಚು ಇಲ್ಲ ಎಂದು ಹೇಳಿದ್ದರೂ, ಅಸ್ಸಾಂನಲ್ಲಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಜುಬೀನ್ ಸಾವಿನ ಕುರಿತು ಅಸ್ಸಾಂನಲ್ಲಿ 60ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು, ಸಿಐಡಿ (CID) ವಿಶೇಷ ತನಿಖೆ ನಡೆಸುತ್ತಿದೆ. ಕಾರ್ಯಕ್ರಮದ ಆಯೋಜಕ ಶ್ಯಾಮಕಾನು ಮಹಂತ ಸೇರಿದಂತೆ ನಾಲ್ವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಜುಬೀನ್ ಅವರ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಪತ್ತೆಯಾಗಿದ್ದು, ಆದರೆ ಇದು ಅವರನ್ನು ನೀರಿನಿಂದ ರಕ್ಷಿಸುವಾಗ ಮತ್ತು ಸಿಪಿಆರ್ (CPR) ನೀಡುವಾಗ ಉಂಟಾದ ಗಾಯಗಳೇ ಹೊರತು ಹಲ್ಲೆಯಿಂದ ಆದ ಗಾಯಗಳಲ್ಲ ಎಂದು ಸಿಂಗಾಪುರ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
