
ಉದಯವಾಹಿನಿ, ಕಿಚ್ಚ ಸೋದರಳಿಯ ಸಂಚಿತ್ ಸಿನಿಮಾದ ಮೆಲೋಡಿ ಗೀತೆ ಅನಾವರಣ..ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಕಂಠ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’ ಈಗಾಗಲೇ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸುದ್ದಿಯಾಗಿದೆ. ಇದೀಗ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಲಾಗಿದೆ.
ಮ್ಯಾಂಗೋ ಪಚ್ಚ ಚಿತ್ರದ ಮೊದಲ ಹಾಡು ‘ಹಸಿರವ್ವ’ ಗೀತೆಗೆ ಯೂತ್ಸ್ ಗೆ ಸಖತ್ ಇಷ್ಟವಾಗಿತ್ತು. ಈಗ ಚಿತ್ರತಂಡ ‘ಅರಗಿಣಿಯೇ’ ಹಾಡನ್ನು ಬಿಡುಗಡೆ ಮಾಡಿದೆ. ಈ ಮೆಲೋಡಿ ಸಾಂಗ್ ಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ಒದಗಿಸಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಹಾಗೂ ಕಪಿಲ್ ಕಪಿಲನ್ ಧ್ವನಿ ನೀಡಿದ್ದಾರೆ. ಹರ್ಷ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಅರಗಿಣಿಯೇ ಹಾಡು ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ. ಅದ್ರಲ್ಲಿಯೂ ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿ ಬೆಂಗಳೂರನ್ನು ಎಷ್ಟು ಸೊಗಸಾಗಿ ತೋರಿಸಿದ್ದರೋ, ಅದೇ ರೀತಿ ಅರಗಿಣಿಯೇ ಹಾಡಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಸೊಬಗನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯಲಾಗಿದೆ.
ಯುವ ನಿರ್ದೇಶಕ ವಿವೇಕಾ ಈ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದು, ಇವರೇ ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಸಹ ಬರೆದಿದ್ದಾರೆ. ಕೆಆರ್ ಜಿ ಸ್ಟುಡಿಯೋ ಹಾಗೂ ಸುದೀಪ್ ಪತ್ನಿ ಪ್ರಿಯಾ ಒಡೆತನದ ಸುಪ್ರಿಯಾನ್ವಿ ಪ್ರೊಡಕ್ಷನ್ನಲ್ಲಿ ಈ ಚಿತ್ರ ಜಂಟಿಯಾಗಿ ನಿರ್ಮಾಣಗೊಂಡಿದೆ. ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್, ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ನಟಿ ಹಂಸ ಸೇರಿ ಅನೇಕರು ನಟಿಸಿದ್ದಾರೆ.
