ಉದಯವಾಹಿನಿ, ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿ ಮುಂದಿನ ತಿಂಗಳಿನಿಂದ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಆರಂಭವಾಗಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಆಡುತ್ತೇನೆಂದು ಹಿರಿಯ ವೇಗದ ಬೌಲರ್ ಜಾಶ್ ಹೇಝಲ್‌ವುಡ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಯ ವೇಳೆ ಹೇಝಲ್‌ವುಡ್ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಗುಣಮುಖರಾಗುತ್ತಿದ್ದಾರೆ. ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದ ಅವರು ಆಷಸ್ ಟೆಸ್ಟ್ ಸರಣಿ ಹಾಗೂ ಬಿಗ್‌ಬ್ಯಾಷ್ ಲೀಗ್ ಟೂರ್ನಿಗಳನ್ನು ಕಳೆದುಕೊಂಡಿದ್ದರು. ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನ ವಿರುದ್ಧದ ಟಿ20ಐ ಸರಣಿಗೂ ಆರ್‌ಸಿಬಿ ಬೌಲರ್ ಲಭ್ಯರಿಲ್ಲ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಜಾಶ್ ಹೇಝಲ್‌ವುಡ್, “ಎಲ್ಲವೂ ಯೋಜನೆಯಂತೆ ನಡೆಯುತ್ತಿದೆ. ನಾವು ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಹಾಗೂ ಸ್ಟ್ರೆನ್ತ್ ವರ್ಕ್ ಕೂಡ ಉತ್ತಮವಾಗಿ ಹೋಗುತ್ತಿದೆ, ಹಾಗಾಗಿ ನಾನು ಟ್ರ್ಯಾಕ್‌ನಲ್ಲಿದ್ದೇನೆ,” ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಜಾಶ್ ಹೇಝಲ್‌ವುಡ್ ಅವರಿಗೆ ಅನುಕೂಲಕರವಾಗಿದೆ. ಫೆಬ್ರವರಿ 11 ರಂದು ಆಸ್ಟ್ರೇಲಿಯಾ ತಂಡ, ತನ್ನ ಮೊದಲನೇ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಆಸ್ಟ್ರೇಲಿಯಾ ವೇಗದ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬಹುದು, ಅಗತ್ಯವಿದ್ದರೆ ಪ್ಯಾಟ್ ಕಮಿನ್ಸ್ ಮರಳುವಿಕೆಯನ್ನು ವಿಳಂಬಗೊಳಿಸಬಹುದು ಎಂದು ಚೀಫ್ ಸೆಲೆಕ್ಟರ್ ಜಾರ್ಜ್ ಬೈಲಿ ಈ ಹಿಂದೆ ಸೂಚಿಸಿದ್ದರು. ಆದಾಗ್ಯೂ, ಸ್ಪರ್ಧೆಯ ಆರಂಭದಲ್ಲಿ ಲಭ್ಯವಿಲ್ಲದ ಒಂದಕ್ಕಿಂತ ಹೆಚ್ಚು ಆಟಗಾರರನ್ನು ಆಯ್ಕೆದಾರರು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಚೇತರಿಕೆಯ ಅವಧಿಯನ್ನು ಹೆಚ್ಚಿಸಿದ್ದರಿಂದ ಸ್ಥಿರವಾಗಿ ಪ್ರಗತಿ ಸಾಧಿಸಲು ಸಹಾಯ ಮಾಡಿದೆ ಎಂದು ಹೇಝಲ್‌ವುಡ್ ಹೇಳಿದರು, ಇದರಿಂದಾಗಿ ಅವರು ತಮ್ಮ ಬಲವರ್ಧನೆ ಕಾರ್ಯಕ್ರಮವನ್ನು ಕಾಯ್ದುಕೊಳ್ಳುವಾಗ ಲಘು ಬೌಲಿಂಗ್ ಮತ್ತು ಓಟಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿದೆ.
