ಉದಯವಾಹಿನಿ , ನ್ಯೂಯಾರ್ಕ್(ಅಮೆರಿಕ): ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 75 ‘ಹೆಚ್ಚಿನ ಅಪಾಯದ’ ದೇಶಗಳ ಜನರಿಗೆ ವಲಸೆ ವೀಸಾವನ್ನು ನಿರ್ಬಂಧಿಸಿ ಅಮೆರಿಕ ಸರ್ಕಾರ ಆದೇಶಿಸಿದೆ. ಈ ನಿರ್ಬಂಧವು ಪ್ರವಾಸಿ ಮತ್ತು ಕೆಲಸದ ವೀಸಾಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಿಷೇಧಿತ ಪಟ್ಟಿಯಲ್ಲಿರುವ ರಾಷ್ಟ್ರಗಳ ಜನರು ಇನ್ನು ಮುಂದೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶವಿಲ್ಲ. ಕೆಲಸ ಅಥವಾ ಪ್ರವಾಸಿ ವೀಸಾದಡಿ ಮಾತ್ರ ಅವರು ನಿಗದಿತ ಅವಧಿಗೆ ಮಾತ್ರ ಉಳಿಯಬಹುದು ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಪಟ್ಟಿ ಮಾಡಲಾದ ‘ಹೈ ರಿಸ್ಕ್’ ದೇಶಗಳಿಂದ ಅಮೆರಿಕಕ್ಕೆ ಬರುವ ಜನರು ಇಲ್ಲಿಯ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯುವಂತಿಲ್ಲ. ವಲಸಿಗರ ಮೇಲೆ ಟ್ರಂಪ್ ವಿಧಿಸುತ್ತಿರುವ ಕಠಿಣ ಕ್ರಮದ ಭಾಗವಾಗಿ ಈ ಆದೇಶ ಹೊರಡಿಸಲಾಗಿದೆ.
“ವಲಸಿಗರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು. ಇಲ್ಲಿಗೆ ಬಂದು ನಮಗೆ ಆರ್ಥಿಕ ಹೊರೆಯಾಗಬಾರದು. ಜೊತೆಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯುವಂತಿಲ್ಲ. ಈ ನಿಯಮ ಪಾಲನೆಯಾಗಲು ವಲಸಿಗರ ಮೇಲೆ ವಿದೇಶಾಂಗ ಇಲಾಖೆಯು ನಿಗಾ ಇಡುತ್ತದೆ” ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಯಾವೆಲ್ಲಾ ದೇಶಗಳಿಗೆ ನಿರ್ಬಂಧ: ಜನವರಿ 21 ರಿಂದ ಈ ಆದೇಶ ಜಾರಿಗೆ ಬರಲಿದೆ. ಅಫ್ಘಾನಿಸ್ತಾನ, ಅಲ್ಬೇನಿಯಾ, ಆಂಟಿಗುವಾ, ಬಾರ್ಬುಡಾ, ಅರ್ಮೇನಿಯಾ, ಅಜೆರ್ಬೈಜಾನ್, ಬಹಾಮಾಸ್, ಬಾಂಗ್ಲಾದೇಶ, ಬಾರ್ಬಡೋಸ್, ಬೆಲಾರಸ್, ಭೂತಾನ್, ಬ್ರೆಜಿಲ್, ಬರ್ಮಾ, ಕಾಂಬೋಡಿಯಾ, ಕ್ಯೂಬಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಜಿಪ್ಟ್, ಇರಾನ್, ಇರಾಕ್, ಜೋರ್ಡಾನ್, ಕುವೈತ್, ಲಿಬಿಯಾ, ನೇಪಾಳ, ಪಾಕಿಸ್ತಾನ, ರಷ್ಯಾ, ಸೇಂಟ್ ವಿನ್ಸೆಂಟ್, ಗ್ರೆನಡೈನ್ಸ್, ಸೊಮಾಲಿಯಾ, ಸಿರಿಯಾ, ಥೈಲ್ಯಾಂಡ್, ಉರುಗ್ವೆ, ಉಜ್ಬೇಕಿಸ್ತಾನ್ ಮತ್ತು ಯೆಮೆನ್ ದೇಶಗಳು ವಲಸೆ ನಿರ್ಬಂಧಿತ ಪಟ್ಟಿಯಲ್ಲಿವೆ.
ಪ್ರವಾಸ, ಕೆಲಸದ ವೀಸಾಕ್ಕೆ ಅಡ್ಡಿಯಿಲ್ಲ: ಇದೇ ವೇಳೆ, ನಿರ್ಬಂಧಿತ ದೇಶಗಳ ಜನರು ಅಮೆರಿಕಕ್ಕೆ ಪ್ರವಾಸ ಮತ್ತು ಕೆಲಸದ ವೀಸಾ ಪಡೆದು ಬರಬಹುದು. ಆದರೆ, ಇಲ್ಲಿಯೇ ಅವರು ಶಾಶ್ವತವಾಗಿ ಉಳಿಯಲು ಕೋರಿ ವಲಸೆ ವೀಸಾಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಈ ದೇಶಗಳ ಜನರಿಗೆ ಗ್ರೀನ್ ಕಾರ್ಡ್ ನೀಡುವಂತಿಲ್ಲ ಎಂದು ಡೊನಾಲ್ಡ್ ಟ್ರಂಪ್ ಖಡಕ್ ಆದೇಶ ನೀಡಿದ್ದಾರೆ.
ಉಳಿದಂತೆ ಬೇರೆ ಯಾವುದೇ ದೇಶಗಳ ಜನರು ವಲಸೆ ವೀಸಾ ಕೋರಿ ಅರ್ಜಿ ಸಲ್ಲಿಸಬಹುದು. ದ್ವಿರಾಷ್ಟ್ರ ನಿಯಮಗಳ ಅನುಸಾರ ಇದನ್ನು ಮಾನ್ಯ ಮಾಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಭಾರತೀಯರಿಗೆ ಇದು ಅನ್ವಯಿಸಲ್ಲ: ಅಮೆರಿಕಕ್ಕೆ ಅತಿ ಹೆಚ್ಚು ವಲಸೆ ಹೋಗುವ ವಿದೇಶಿಗರ ಪೈಕಿ ಭಾರತೀಯರು ಹೆಚ್ಚಿದ್ದಾರೆ. ಹೀಗಾಗಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಈ ನಿರ್ಬಂಧವು ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತೀಯರು ಕೆಲಸ, ಪ್ರವಾಸಿ ಮತ್ತು ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಕೋರಿ ವಲಸೆ ವೀಸಾವನ್ನು ಪಡೆಯಬಹುದಾಗಿದೆ.
