ಉದಯವಾಹಿನಿ , ಬ್ಯಾಂಕಾಕ್ (ಥಾಯ್ಲೆಂಡ್ ): ಇಲ್ಲಿ ರೈಲು ಹಳಿ ನಿರ್ಮಾಣ ಕಾರ್ಯಕ್ಕಾಗಿ ಅಳವಡಿಸಿದ್ದ ಬೃಹತ್ ಕ್ರೇನ್ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ದುರಂತದಲ್ಲಿ 22 ಮಂದಿ ಪ್ರಯಾಣಿಕರು ಸಾವಿಗೀಡಾಗಿ, 80ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಚೀನಾ ನೆರವಿನಲ್ಲಿ ರಾಜಧಾನಿ ಬ್ಯಾಂಕಾಕ್‌ನ ಈಶಾನ್ಯದಲ್ಲಿರುವ ನಖೋನ್ ರಾಟ್ಚಸಿಮಾ ಎಂಬಲ್ಲಿ ಹೈಸ್ಪೀಡ್ ರೈಲು ಜಾಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಅಳವಡಿಸಿದ್ದ ಕ್ರೇನ್ ಕೆಳಭಾಗದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದಿದೆ. ಇದರಿಂದ ರೈಲು ಹಳಿ ತಪ್ಪಿದೆ. ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡು ಸಾವು – ನೋವು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ದುರಂತಕ್ಕೀಡಾದ ರೈಲು ಬ್ಯಾಂಕಾಕ್‌ನಿಂದ ಉಬೊನ್ ರಾಟ್ಚಸಿಮಾ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಮತ್ತೊಂದು ಹೈಸ್ಪೀಡ್ ರೈಲ್ವೆ ಜಾಲದ ಹಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ವೇಳೆ ಕ್ರೇನ್ ಮುರಿದು ಬಿದ್ದಿದೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ನಖೋನ್ ರಾಟ್ಚಸಿಮಾ ಪ್ರಾಂತ್ಯದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ರೈಲು ಮಾರ್ಗದ ಮೇಲೆ ಹೈಸ್ಪೀಡ್ ರೈಲು ಜಾಲ: ಈಗಾಗಲೇ ಅದೇ ಮಾರ್ಗವಾಗಿ ಸಾಮಾನ್ಯ ರೈಲು ಮಾರ್ಗ (ಮೆಟ್ರೋ ಮಾದರಿ) ಚಾಲ್ತಿಯಲ್ಲಿದೆ. ಇದೀಗ, ಅದೇ ಮಾರ್ಗವಾಗಿ ಹೈಸ್ಪೀಡ್ ರೈಲು ಜಾಲದ ನಿರ್ಮಾಣ ಕಾರ್ಯ ನಡೆಯುತ್ತಿದೆ. ದುರಂತಕ್ಕೀಡಾದ ರೈಲಿನಲ್ಲಿ 195 ಮಂದಿ ಪ್ರಯಾಣಿಸುತ್ತಿದ್ದರು. ಕ್ರೇನ್ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೋಗಿಗಳು ಅಗ್ನಿಗೆ ಆಹುತಿಯಾಗಿವೆ. ಹಲವು ಪ್ರಯಾಣಿಕರು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿಯಿಂದಾಗಿ ಬೋಗಿಗಳಿಂದ ದಟ್ಟ ಹೊಗೆ ಬರುತ್ತಿದೆ. ಕ್ರೇನ್ ಬಿದ್ದ ರಭಸಕ್ಕೆ ಎಲ್ಲ ಬೋಗಿಗಳು ಹಳಿ ತಪ್ಪಿವೆ. 5.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹೈಸ್ಪೀಡ್ ರೈಲು ಜಾಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಚೀನಾ ಇದಕ್ಕೆ ನೆರವು ನೀಡಿದೆ. ಅದರ ಯೋಜನೆಯಾದ ಬೆಲ್ಟ್ ಮತ್ತು ರೋಡ್ ಯೋಜನೆಯಡಿ ಈ ಕಾರ್ಯ ನಡೆಯುತ್ತಿದೆ. 2028 ರ ವೇಳೆಗೆ ಬ್ಯಾಂಕಾಕ್ ಅನ್ನು ಲಾವೋಸ್ ಮೂಲಕ ಚೀನಾದ ಕುನ್ಮಿಂಗ್‌ಗೆ ಸಂಪರ್ಕಿಸುವ ಗುರಿ ಹೊಂದಲಾಗಿದೆ.
