ಉದಯವಾಹಿನಿ , ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಪಾಕಿಸ್ತಾನಿ ಸೇನೆಯು ಭಯೋತ್ಪಾದಕ ನಾಯಕತ್ವದ ಎರಡನೇ ತಲೆಮಾರನ್ನು ರೂಪಿಸಲು ಕೆಲಸ ಮಾಡುತ್ತಿವೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸು ನೆರವನ್ನು ಒದಗಿಸುವುದರ ಜತೆಗೆ, ವಯಸ್ಸಾಗುತ್ತಿರುವ ಉಗ್ರ ಕಮಾಂಡರ್‌ಗಳ ಪುತ್ರರು ಹಾಗೂ ಆಪ್ತ ಸಂಬಂಧಿಕರನ್ನು ತರಬೇತಿ ನೀಡಿ ಬೆಳೆಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಗುಪ್ತಚರ ಮೂಲಗಳ ಪ್ರಕಾರ, ಇತ್ತೀಚೆಗೆ ಪಾಕಿಸ್ತಾನದ ಬಹವಾಲ್ಪುರದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಇದರಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಪಾಕಿಸ್ತಾನಿ ಸೇನೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಮುಂದಿನ ತಲೆಮಾರಿನ ನಾಯಕರು ಎಂದು ಗುರುತಿಸಲಾದ ಉಗ್ರ ಸಂಘಟನೆಗಳ ಹಿರಿಯ ಕಮಾಂಡರ್‌ಗಳು ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಜಮ್ಮು-ಕಾಶ್ಮೀರಕ್ಕೆ ದೊಡ್ಡ ಪ್ರಮಾಣದಲ್ಲಿ ಅಕ್ರಮ ಒಳನುಸುಳುವಿಕೆಯನ್ನು ಯೋಜಿಸುವುದು ಹಾಗೂ ಮುಂದಿನ ಭಯೋತ್ಪಾದಕ ದಾಳಿಗಳನ್ನು ಸಂಯೋಜಿಸುವುದೇ ಈ ಸಭೆಯ ಪ್ರಮುಖ ಉದ್ದೇಶ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘಟಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಗಳು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಲಷ್ಕರ್ ಸಂಘಟನೆಯ ಹಿರಿಯ ಕಾರ್ಯಕರ್ತರಾದ ತಲ್ಹಾ ಸಯೀದ್ ಮತ್ತು ಸೈಫುಲ್ಲಾ ಕಸೂರಿ, ಜೈಶ್ ಕಮಾಂಡರ್ ಅಬ್ದುರ್ ರೌಫ್‌ನೊಂದಿಗೆ ಬಹಾವಲ್ಪುರದಲ್ಲಿ ಹಾಜರಿದ್ದ ಎಂದು ಗುಪ್ತಚರ ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ತಲ್ಹಾ ಸಯೀದ್ ಮತ್ತು ಸೈಫುಲ್ಲಾ ಕಸೂರಿ ಬಹಾವಲ್‌ಪುರದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಜತೆ ರಹಸ್ಯ ಸಭೆ ನಡೆಸಿದ್ದಾರೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ, ಪಹಲ್ಗಾಮ್ ದಾಳಿಗೂ ಮುನ್ನವೂ ಇದೇ ರೀತಿಯ ಸಭೆಗಳು ನಡೆದಿದ್ದವು. ಇದರಿಂದ ಈ ಎರಡು ಉಗ್ರ ಸಂಘಟನೆಗಳ ನಡುವೆ ಸಂಯೋಜನೆ ಮತ್ತು ಸಹಕಾರ ಇನ್ನಷ್ಟು ಗಾಢವಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
