ಉದಯವಾಹಿನಿ, ಹಾಂಕಾಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಂದ ಮೇಲೆ ಎಲ್ಲ ದೇಶಗಳ ಮೇಲೆ ಸುಂಕವನ್ನು ಹೇರಿಕೆ ಮಾಡಿದ್ದಾರೆ. ಈ ಸುಂಕಗಳ ಹೇರಿಕೆ ಬಳಿಕವೂ ಚೀನಾ ತನ್ನ ರಫ್ತನ್ನು ಹೆಚ್ಚಿಸಿದೆ. ಹೀಗೆ ಬಲವಾದ ರಫ್ತುಗಳಿಂದ ಚೀನಾದ ಆರ್ಥಿಕತೆಯು 2025 ರಲ್ಲಿ ಶೇ 5 ರಷ್ಟು ವಾರ್ಷಿಕ ಏರಿಕೆಯನ್ನು ಕಾಣುವ ಮೂಲಕ ಪ್ರಗತಿ ಸಾಧಿಸಿದೆ.
ಈ ಬೆಳವಣಿಗೆಯ ನಡುವೆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬೆಳವಣಿಗೆಯು ಶೇ 4.5ಕ್ಕೆ ಕುಸಿತ ಕಂಡಿದೆ ಎಂದು ಸರ್ಕಾರ ಸೋಮವಾರ ಹೇಳಿದೆ. 2022 ರ ಅಂತ್ಯದಲ್ಲಿ ಚೀನಾ ಕಠಿಣ COVID-19 ಸಾಂಕ್ರಾಮಿಕ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದಾಗಿನಿಂದ ಇದು ನಿಧಾನವಾದ ತ್ರೈಮಾಸಿಕ ಬೆಳವಣಿಗೆಯಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ 4.8% ವಾರ್ಷಿಕ ವೇಗದಲ್ಲಿ ಬೆಳೆವಣಿಗೆ ಕಂಡಿತ್ತು.
ಕೋವಿಡ್ ಬಳಿಕ ಚೀನಾದಲ್ಲಿ ರಿಯಲ್ ಎಸ್ಟೇಟ್ ಅತಿದೊಡ್ಡ ಕುಸಿತ ಕಂಡಿತ್ತು. ಹೀಗಾಗಿ ಆ ವಲಯವನ್ನು ಉತ್ತೇಜನಗೊಳಿಸಲು ಚೀನಾ ಸರ್ಕಾರ ತೀವ್ರ ಕಸರತ್ತು ನಡೆಸಿದೆ. ಅವರ ನಿರೀಕ್ಷೆಯಂತೆ ಕಳೆದ ವರ್ಷದ ವಾರ್ಷಿಕ ಬೆಳವಣಿಗೆಯು ಸರ್ಕಾರ ಈ ಹಿಂದೆ ಅಂದಾಜಿಸಿದಂತೆ ಶೇ 5 ರಷ್ಟು ಬೆಳವಣಿಗೆ ದಾಖಲಿಸಿತ್ತು. ಬಲವಾದ ರಫ್ತುಗಳು ದುರ್ಬಲ ಗ್ರಾಹಕ ಖರ್ಚು ಮತ್ತು ವ್ಯವಹಾರ ಹೂಡಿಕೆಯನ್ನು ಸರಿದೂಗಿಸಲು ಸಹಾಯ ಮಾಡಿತು. ಚೀನಾ ಸುಮಾರು 1.2 ಟ್ರಿಲಿಯನ್ ಡಾಲರ್ ದಾಖಲೆಯ ವ್ಯಾಪಾರ ಹೆಚ್ಚುವರಿಗೆ ಕಾರಣವಾಯಿತು. ಇದು ಚೀನಾದ ಆರ್ಥಿಕ ಚೇತರಿಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಯ ಎಂಜಿನ್ ಎಷ್ಟು ಕಾಲ ಪ್ರಾಥಮಿಕ ಚಾಲಕನಾಗಿ ಉಳಿಯಬಹುದು ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ ಎಂದು ಡಚ್ ಬ್ಯಾಂಕ್ ಐಎನ್‌ಜಿಯಲ್ಲಿ ಗ್ರೇಟರ್ ಚೀನಾದ ಮುಖ್ಯ ಅರ್ಥಶಾಸ್ತ್ರಜ್ಞ ಲಿನ್ ಸಾಂಗ್ ಇತ್ತೀಚಿನ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 2025 ರ ಜನವರಿ 20 ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್, ಬಹುತೇಕ ರಾಷ್ಟ್ರಗಳ ಮೇಲೆ ಸುಂಕವನ್ನು ವಿಧಿಸಿದ್ದರಿಂದ ಬಹುತೇಕ ರಾಷ್ಟ್ರ ಗಳ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಈ ನಡುವೆಯೂ ಚೀನಾ ತನ್ನ ರಫ್ತು ಪ್ರಮಾಣವನ್ನು ಹೆಚ್ಚಳ ಮಾಡಿಕೊಂಡಿದೆ.
