ಉದಯವಾಹಿನಿ, ತನ್ನದಲ್ಲದ ದೇಶಕ್ಕೆ ಕಾಲಿಟ್ಟು ಯುದ್ಧ ಮಾಡೋದು, ರಹಸ್ಯ ಕಾರ್ಯಾಚರಣೆಗಳನ್ನ ನಡೆಸೋದು, ಬಾಂಬ್ ಹಾಕೋದು, ಅಷ್ಟೇ ಯಾಕೆ ಆ ದೇಶದ ಅಧ್ಯಕ್ಷರನ್ನೇ ಸೆರೆಹಿಡಿದು ಹೊತ್ತೊಯ್ಯೋದು. ಇಡೀ ಜಗತ್ತೇ ತನ್ನ ಪ್ರಭಾವದಲ್ಲಿದೆ ಅನ್ನೋ ಹಾಗೇ ನಡೆಯೋದು ಅಮೆರಿಕಕ್ಕೆ ಕಾಮನ್ ಆಗಿಬಿಟ್ಟಿದೆ.
ಅಮೆರಿಕ ವೆನೆಜುವೆಲಾದ ಮೇಲೆ ನಡೆಸಿರುವ ದಾಳಿಯು ಆ ನಂತರ ತೆಗೆದುಕೊಂಡ ಕ್ರಮಗಳು ವಿಶ್ವಕ್ಕೆ ಇನ್ನಷ್ಟು ಭೀತಿ ತಂದೊಡ್ಡಿದೆ. ಹೌದು. ಆರ್ಥಿಕ ಉದ್ದೇಶಗಳಿಗಾಗಿ ವಿದೇಶಗಳ ಮೇಲೆ ಸುಂಕಾಸ್ತ್ರ ಪ್ರಯೋಗಿಸುತ್ತಿದ್ದ ಅಮೆರಿಕ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೇನಾಸ್ತ್ರ ಪ್ರಯೋಗಿಸುತ್ತಿದೆ. ಯಾವಾಗಲೂ ಯುದ್ಧ ನಿಲ್ಲಿಸಿದ್ದೇನೆ ತನಗೆ ಶಾಂತಿ ಪ್ರಶಸ್ತಿ ಕೊಡಬೇಕು ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಟ್ರಂಪ್ ಈಗ ಯುದ್ಧದ ಹಾದಿಯನ್ನ ಹಿಡಿದಿರೋದು ವಿಶ್ವದ ಇತರ ದೇಶಗಳಲ್ಲಿ ಭಾರೀ ಕಳವಳ ಹೆಚ್ಚಿಸಿದೆ.
ಇತಿಹಾಸದುದ್ದಕ್ಕೂ ವಿಶ್ವದ ದೊಡ್ಡಣ್ಣ ತನ್ನ ಸಾಮ್ರಾಜ್ಯಶಾಹಿ ಮನೋಭಾವ ಪ್ರದರ್ಶಿಸುತ್ತಲೇ ಬಂದಿದೆ. ಆಕ್ರಮಣಕಾರಿ ನೀತಿಗಳಿಂದ ವಿದೇಶಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಇಡೀ ಜಗತ್ತೇ ತನ್ನ ಹಿಡಿತದಲ್ಲಿರಬೇಕು ಎನ್ನುವ ಸರ್ವಾಧಿಕಾರಿ ಮನೋಭಾವ ಅಮೆರಿಕದ್ದು. ದಿಢೀರ್ ಬೆಳವಣಿಗೆ ಎಂಬಂತೆ, ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿ ಸೆರೆಯಲ್ಲಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್. ಸುಭದ್ರ ಸರ್ಕಾರ ಮತ್ತು ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಈ ಕ್ರಮಕೈಗೊಳ್ಳಲಾಗಿದೆ ಅಂತ ಟ್ರಂಪ್ ನೆಪವೊಡ್ಡಿದ್ದಾರೆ. ಆದರೆ, ಅಸಲಿ ಕಾರಣವೇ ಬೇರೆ ಎನ್ನಲಾಗುತ್ತಿದೆ. ವೆನೆಜುವೆಲಾ ಬೆನ್ನಲ್ಲೇ ಅಮೆರಿಕದ ನೆರೆಯ ಪುಟ್ಟ ರಾಷ್ಟ್ರಗಳಲ್ಲಿ ಆತಂಕ ಮನೆ ಮಾಡಿದೆ. ಯಾವಾಗ ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಭೀತಿ ಇದೆ.
ಅಷ್ಟೇ ಅಲ್ಲ ಒಂದು ಕಾಲದಲ್ಲಿ ದಕ್ಷಿಣ ಅಮೆರಿಕದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ, ವಿಶ್ವದ ಅತಿದೊಡ್ಡ ತೈಲ ನಿಕ್ಷಪ ಹೊಂದಿರುವ ವೆನೆಜುವೆಲಾವನ್ನ ಈಗ ಕರುಣೆಯಿಂದ ನೋಡುವಂತೆ ಮಾಡಿರೋದು ಅಮೆರಿಕವೇ. ಕ್ಯಾರಕಾಸ್ ಮೇಲೆ ನಡೆಸಿದ ಆ ಒಂದು ದಾಳಿಯಿಂದ ಇಡೀ ವೆನೆಜುವೆಲಾ ಆರ್ಥಿಕ ದಿವಾಳಿಯತ್ತ ಸಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
