
ಉದಯವಾಹಿನಿ, ನವದೆಹಲಿ: ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಸಲ್ಲಿಸಿದ ಪೂರಕ ಆರೋಪಪಟ್ಟಿ ಕುರಿತು ವಾದ ಮಂಡಿಸಲು ಜಾರಿ ನಿದೇಶನಾಲಯಕ್ಕೆ (ED) ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಸಮಯ ನೀಡಿದೆ.ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸುಶಾಂತ್ ಚಂಗೋತ್ರ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.26ಕ್ಕೆ ನಿಗದಿಪಡಿಸಿದರು. ಇದೇ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಇಡಿಗೆ ಕೋರ್ಟ್ ನಿರ್ದೇಶನ ನೀಡಿತು.ಇನ್ನು ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಹಣ ವರ್ಗಾವಣೆ ಪ್ರಕರಣವಿಲ್ಲ. ಆದ್ದರಿಂದ ಇಡಿಯ ದೂರನ್ನು ಕೋರ್ಟ್ ಪರಿಗಣಿಸಬಾರದು ಎಂದು ವಾದ್ರಾ ಪರ ವಕೀಲರು ವಾದಿಸಿದರು. ಇದೇ ವೇಳೆ ಇಡಿ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನವೀನ್ ಕುಮಾರ್ ಅವರು ವಕೀಲ ಫೈಜಾನ್ ಖಾನ್ ಅವರ ನೆರವಿನೊಂದಿಗೆ ವಾದ ಮಂಡಿಸಿದರು.
ಭಂಡಾರಿ ವಿರುದ್ಧದ ED ಪ್ರಕರಣ: ಆಸ್ತಿ ಮುಟ್ಟುಗೋಲು ಕುರಿತ ಅರ್ಜಿಯನ್ನು ವಜಾಗೊಳಿಸುವಂತೆ ಸಂಜಯ್ ಭಂಡಾರಿ ಸಲ್ಲಿಸಿದ ಮನವಿಯನ್ನು ಇಡಿ ವಿರೋಧಿಸಿತ್ತು. ಜೊತೆಗೆ ಹೊಸ ಸಂಗತಿ ಪರಿಚಯಿಸಲು ಇಡಿಗೆ ಅವಕಾಶ ನೀಡಬಾರದು ಎಂದು ಭಂಡಾರಿ ವಾದಿಸಿದ್ದರು. ಈ ಪ್ರಕರಣದಲ್ಲಿ ಭಂಡಾರಿ ಅವರನ್ನು ಜುಲೈ 5 ರಂದು ಪರಾರಿಯಾಗಿರುವ ಆರ್ಥಿಕ ಅಪರಾಧಿ (FEO) ಎಂದು ಘೋಷಿಸಲಾಗಿದೆ. ಈ ನಿರ್ಧಾರವನ್ನು ಭಂಡಾರಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇನ್ನೂ ವಿಚಾರಣೆ ಬಾಕಿ ಇದೆ.
ಭಾರತ, ದುಬೈ ಮತ್ತು ಯುಕೆಯಲ್ಲಿ ಭಂಡಾರಿ ಅವರು ಬೇನಾಮಿ ಆಸ್ತಿ ಹೊಂದಿದ್ದಾರೆ. ಹಲವು ಬ್ಯಾಂಕ್ ಖಾತೆಗಳು ಅವರ ಪತ್ನಿಯ ಹೆಸರಿನಲ್ಲಿವೆ. ಇವರ ಒಟ್ಟು ಆಸ್ತಿ 100 ಕೋಟಿ ಮೀರಿದೆ ಎಂದು ಇಡಿ ತಿಳಿಸಿದೆ. ಭಂಡಾರಿ ಅವರು ವಾದ್ರಾ ಅವರ ಆಪ್ತ ಸಹಚರ ಎಂದು ಆರೋಪಿಸಲಾಗಿದೆ.
ವಾದ್ರಾ ವಿರುದ್ಧದ ಆರೋಪಗಳು: ಇಡಿ ತನ್ನ ಇತ್ತೀಚಿನ ಪೂರಕ ಪ್ರಾಸಿಕ್ಯೂಷನ್ ದೂರಿನಲ್ಲಿ ರಾಬರ್ಟ್ ವಾದ್ರಾ ಅವರನ್ನು ಆರೋಪಿಯನ್ನಾಗಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕಮಿಷನ್ ಪಡೆದು ಭಂಡಾರಿ ಅವರು ಲಂಡನ್‌ನಲ್ಲಿ ಆಸ್ತಿ ಖರೀದಿಸಿದ್ದು, ಇದರಲ್ಲಿ ವಾದ್ರಾ ಕೂಡ ಪಾಲುದಾರರಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.
ತಮ್ಮ ಮೇಲಿನ ಆರೋಪ ತಳ್ಳಿಹಾಕಿದ ವಾದ್ರಾ, ಈ ತನಿಖೆ ರಾಜಕೀಯ ಪ್ರೇರಿತ ಎಂದಿದ್ದರು. ವಾದ್ರಾ ಅವರನ್ನು ಸಮಸ್ಯೆಗೆ ಸಿಲುಕಿಸಲು ಹಳೆಯ ವಿಷಯಗಳನ್ನು ಎತ್ತುತ್ತಿದ್ದಾರೆ ಎಂದು ವಾದ್ರಾ ಪರ ಅವರ ವಕೀಲರು ದೂರಿದ್ದಾರೆ.
2019 ರಿಂದ ಜಾಮೀನಿನ ಮೇಲೆ ವಾದ್ರಾ ಹೊರಗಿದ್ದಾರೆ. ಜೊತೆಗೆ ಈ ಹಿಂದೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿಗೆ ಹೇಳಿಕೆ ನೀಡಿದ್ದರು. ಐಟಿ ದಾಳಿ ಬಳಿಕ 2016ರಲ್ಲಿ ಭಂಡಾರಿ ಅವರು ಭಾರತದಿಂದ ಲಂಡನ್ ಗೆ ತೆರಳಿದ್ದರು. ಬಳಿಕ 2017ರಲ್ಲಿ ಇಡಿ ಭಂಡಾರಿ ವಿರುದ್ಧ ಪ್ರಕರಣ ದಾಖಲಿಸಿದೆ.
