ಉದಯವಾಹಿನಿ, ಹೈದರಾಬಾದ್ : ಹೈದರಾಬಾದ್ನ ನಾಂಪಲ್ಲಿಯಲ್ಲಿನ ಬಾಚಾ ಕ್ರಿಸ್ಟಲ್ ಪಿಠೋಪಕರಣದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡ ನಾಲ್ಕು ಮಹಡಿಯಲ್ಲೂ ಅಗ್ನಿ ಜ್ವಾಲೆ ಕಂಡಿದೆ. ಘಟನೆ ವರದಿ ಬೆನ್ನಲ್ಲೇ ತಕ್ಷಣಕ್ಕೆ ಸ್ಥಳಕ್ಕೆ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಚಾರಣೆ ಭರದಿಂದ ಸಾಗಿದೆ. ಘಟನೆಯ ವೇಳೆ ಅಗ್ನಿ ಅನಾಹುತದಿಂದ ತಪ್ಪಿಸಿಕೊಂಡ ಬಂದಿರುವ ಅಂಗಡಿಯ ನೌಕರರು ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಕಟ್ಟಡವನ್ನು ಆವರಿಸಿತು ಎಂದು ತಿಳಿಸಿದ್ದಾರೆ.
ಕಟ್ಟಡದಲ್ಲಿ ಆರು ಮಂದಿ ಸಿಲುಕಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಂಗಡಿಯ ಮಾಲೀಕರ ಕಾರು ಚಾಲಕ, ಕೆಲಸಗಾರ, ವಾಚ್ಮ್ಯಾನ್ ಮತ್ತು ಅವರ ಪತ್ನಿ ಮತ್ತು ಇಬ್ಬರು ಮಹಿಳೆಯರು ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧಾರದ ಮೇಲೆ ಅಗ್ನಿಶಾಮಕದಳ ಕಟ್ಟಡದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಈ ನಡುವೆ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸು ಕೆಲಸ ನಡೆಯುತ್ತಿದೆ, ಕಟ್ಟಡದಲ್ಲಿ ಸಿಲುಕಿರುವವರನ್ನ ಸುರಕ್ಷಿತವಾಗಿ ಹೊರ ತರಲು ಎಲ್ಲ ಪ್ರಯತ್ನಗಳು ಮಾಡಲಾಗುತ್ತಿದೆ ಎಂದು ಖೈರತಾಬಾದ್ ವಲಯ ಡಿಸಿಪಿ ಶಿಲ್ಪವಲ್ಲಿ ತಿಳಿಸಿದ್ದಾರೆ.
ಸುತ್ತಮುತ್ತಲ ಕಟ್ಟಡಗಳಿಂದ ಜನರ ಸ್ಥಳಾಂತರ: ನಾಲ್ಕು ಕಟ್ಟಡದಲ್ಲಿ ಅಗ್ನಿ ಜ್ವಾಲೆಗಳು ಕಾಣಿಸಿಕೊಂಡಿದ್ದು, ಇದು ಅಕ್ಕಪಕ್ಕದ ಮಳಿಗೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯ ಅಂಗಡಿಗಳ ತೆರವು ಕಾರ್ಯಾಚರಣೆ ಕೂಡಾ ನಡೆದಿದೆ. ಜೆಸಿಬಿ ಸಹಾಯದಿಂದ ಗೋಡೆಯನ್ನು ನೆಲಸಮ ಮಾಡಲಾಗಿದೆ. ಪೀಠೋಪಕರಣ ಮಳಿಗೆಯಾಗಿರುವುದರಿಂದ ಬೆಂಕಿ ವೇಗವಾಗಿ ಹರಡುತ್ತಿದ್ದು ಕಟ್ಟಡದ ತುಂಬಾ ದಟ್ಟ ಹೊಗೆ ಆವರಿಸಿದೆ. ಆ್ಯಂಬುಲೆನ್ಸ್ಗಳು ಸ್ಥಳದಲ್ಲಿದ್ದು, ಸುತ್ತಮುತ್ತಲ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು. ಈ ಮಳಿಗೆ ಮಾಲೀಕ ಸತೀಶ್ ಬಚ್ಚಾ ಎಂದು ತಿಳಿದು ಬಂದಿದ್ದು, ಇವರು ನಾಂಪಲ್ಲಿಯ ಪೀಠೋಪಕರಣ ವ್ಯಾಪಾರಿಗಳ ಅಸೋಸಿಯೇಷನ್ ಅಧ್ಯಕ್ಷರೂ ಕೂಡಾ ಆಗಿದ್ದಾರೆ.
ಟ್ರಾಫಿಕ್ ದಟ್ಟಣೆ: ಈ ಅಗ್ನಿ ದುರಂತದಿಂದ ಆತಂಕಗೊಂಡ ಸುತ್ತಮುತ್ತಲ ಪ್ರದೇಶದ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಇದು ನಗರದ ಪ್ರಮುಖ ಜನನಿಬಿಡ ರಸ್ತೆಯಾಗಿದ್ದು, ಟ್ರಾಫಿಕ್ ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಾಯಿಸಲಾಗಿದೆ. ಇನ್ನು ಈ ಅಗ್ನಿ ಅನಾಹುತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸದ್ಯ ಬೆಂಕಿ ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ಅಗ್ನಿಶಾಮಕ ದಳ ಸತತ ಪ್ರಯತ್ನ ಮಾಡುತ್ತಿದೆ.
