ಉದಯವಾಹಿನಿ, ರಾಂಚಿ: ಜಾರ್ಖಂಡ್‌ನ ಸಾರಂಡಾ ಕಾಡಿನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಐವರು ಮಹಿಳೆಯರು ಸೇರಿದಂತೆ 17 ಮಂದಿ ನಕ್ಸಲರು ಬಲಿಯಾಗಿದ್ದಾರೆ. ಆಪರೇಷನ್ ಮೇಘಬುರು ಹೆಸರಿನಲ್ಲಿ 209 ಕೋಬ್ರಾ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್‌ ತಂಡದಿಂದ ಜ.22 ರಂದು ಈ ಎನ್‌ಕೌಂಟರ್‌ ಆರಂಭಗೊಂಡಿತ್ತು. ಸತತ ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐನ (ಮಾವೋವಾದಿ) ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ, ಪತಿರಾಮ್ ಮಾಜ್ಹಿ ಅಲಿಯಾಸ್ ಅನಲ್ ಡಾ ಈ ವೇಳೆ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ 149 ಪ್ರಕರಣಗಳಿದ್ದವು, ಅಲ್ಲದೇ ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ. ಇವನ ಜೊತೆಗೆ ಇನ್ನಿತರ 14 ಮಂದಿ ಹತ್ಯೆಯಾಗಿದ್ದರು.

ಮತ್ತೊಮ್ಮೆ ನಡೆದ ಗುಂಡಿನ ದಾಳಿಯ ಬಳಿಕ ಎರಡು ಶವಗಳು ಪತ್ತೆಯಾಗಿವೆ. ಈ ಮೂಲಕ ಸಾವಿನ ಸಂಖ್ಯೆ 17 ಕ್ಕೆ ಏರಿದೆ. ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಹೇಳಿಕೊಂಡಿವೆ. ಭದ್ರತಾ ಪಡೆಗಳಿಂದ ಶೋಧ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನವರಿಯ ಆರಂಭದಲ್ಲಿ, ಬಸ್ತಾರ್ ವ್ಯಾಪ್ತಿಯ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದರು. ಛತ್ತೀಸ್‌ಗಢದಲ್ಲಿ ಒಟ್ಟು 47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶರಣಾಗಿದ್ದರು. ಜ.20 ರಂದು, ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಮಾತನಾಡುತ್ತಾ, ನಗರ ನಕ್ಸಲಿಸಂನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!