ಉದಯವಾಹಿನಿ, ರೋಡ್ಸ್ (ಗ್ರೀಸ್): ಅಧಿಕ ತಾಪಮಾನದ ಮೂಲಕ ಗ್ರೀಸ್‌ನಲ್ಲಿ ಸಂಕಷ್ಟ ತಂದಿರುವ ನಡುವೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಗ್ರೀಕ್ ದ್ವೀಪ ರೋಡ್ಸ್‌ನಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಒಂದು ವಾರದಿಂದಲೂ ನಿಯಂತ್ರಣಕ್ಕೆ ಬಾರದೆ ಇನ್ನಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದ್ವೀಪದಿಂದ ೨೦,೦೦೦ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಾರೀ ಗಾಳಿ ಹಾಗೂ ಉಷ್ಣ ಮಾರುತದಿಂದ ದೇಶದ ಇನ್ನೂ ಮೂರು ಕಡೆ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿವೆ.
ವಾರಾಂತ್ಯದ ಸಂದರ್ಭ ದಕ್ಷಿಣ ರೋಡ್ಸ್‌ಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ರವಿವಾರ ಹಲವು ಕರಾವಳಿ ಪ್ರದೇಶಗಳಿಗೆ ಕಾಡ್ಗಿಚ್ಚು ವ್ಯಾಪಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶದಿಂದ ಸುಮಾರು ೧೯,೦೦೦ ಜನರನ್ನು ಬಸ್ ಹಾಗೂ ದೋಣಿಗಳ ಮೂಲಕ ಸ್ಥಳಾಂತರ ಮಾಡಿದ್ದು ಇವರಲ್ಲಿ ಹೆಚ್ಚಿನವರು ಪ್ರವಾಸಿಗರು. ಈ ಮಧ್ಯೆ, ಯುರೋಪಿಯನ್ ಯೂನಿಯನ್ ಹಾಗೂ ಇತರ ದೇಶಗಳು ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಕೈಜೋಡಿಸಿದ್ದು ಟರ್ಕಿ ದೇಶ ೮ ನೀರು ಎರಚುವ ವಿಮಾನಗಳು ಹಾಗೂ ೧೦ ಹೆಲಿಕಾಪ್ಟರ್‌ಗಳನ್ನು ಒದಗಿಸಿದೆ. ಈ ಹೆಲಿಕಾಪ್ಟರ್‌ಗಳು ಬೆಂಕಿಬಿದ್ದಿರುವ ಪ್ರದೇಶದಲ್ಲಿ ಗೋಚರತೆ ಕಡಿಮೆಯಿದ್ದರೂ ನೆಲದಿಂದ ೫ ಮೀಟರ್‌ನಷ್ಟು ಎತ್ತರದಲ್ಲಿ ಕಾರ್ಯಾಚರಿಸಲು ಸಮರ್ಥವಾಗಿವೆ. ದಕ್ಷಿಣ ಗ್ರೀಕ್ ಮೈನ್‌ಲ್ಯಾಂಡ್‌ನಲ್ಲಿ ತಾಪಮಾನ ೪೫ ಡಿಗ್ರಿ ಸೆಲ್ಶಿಯಸ್‌ಗೂ ಹೆಚ್ಚಿರುವುದರಿಂದ ಗ್ರೀಸ್‌ನ ಹಲವು ಪ್ರದೇಶಗಳಲ್ಲಿ ಸೋಮವಾರ ಬೆಂಕಿ ಹರಡುವ ಅಪಾಯ ಗರಿಷ್ಠವಾಗಿದೆ ಎಂದು ಟರ್ಕಿ ಅಗ್ನಿಶಾಮಕ ದಳದ ವಕ್ತಾರ ವ್ಯಾಸಿಲಿಸ್ ವಥ್ರಕೊಗಿಯಾನಿಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!