ಉದಯವಾಹಿನಿ, ಬೆಂಗಳೂರು: ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ ಇದೆ. ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಮಾ.5 ರಂದು ಬೃಹತ್ ಪ್ರತಿಭಟನೆ ಮಾಡ್ತಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಚಾಮರಾಜಪೇಟೆ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ ಇದೆ. ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಿದ್ದಾರೆ. ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸಿಎಂಗೆ ಹಲವು ಬಾರಿ ಮನವಿ ಮಾಡಿದ್ರೂ ಸರ್ಕಾರ ಬಗೆಹರಿಸಿಲ್ಲ. ಲೋಕೋಪಯೋಗಿ ಇಲಾಖೆ, ಜಿಬಿಎ, ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ. ಚಿಕ್ಕಬಳ್ಳಾಪುರದ ಗುತ್ತಿಗೆದಾರ ಮುನೇಗೌಡ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 25 ಲಕ್ಷ ಬಾಕಿ ಕೊಟ್ಟಿಲ್ಲ ಅಂತ ಬ್ಯಾಂಕ್‌ನವರು ಮನೆ ಬಳಿ ಬಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ, ಜಿಬಿಎನಲ್ಲಿ ಮಾತ್ರ ಜೇಷ್ಠತೆ ಪಾಲನೆ ಮಾಡಲಾಗುತ್ತಿದೆ.
ವಿವಿಧ ಇಲಾಖೆ ಸಚಿವರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಗುತ್ತಿಗೆದಾರರ ಸಮಸ್ಯೆಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತಿಲ್ಲ. ಈಗಾಗಲೇ ಸಿಎಂಗೆ 100 ಪುಟಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಟೆಂಡರ್ ಅನುಮೋದನೆ ಹಾಗೂ ಹಣ ಬಿಡುಗಡೆ ಮಾಡುವಲ್ಲಿ ಹಿಂದಿನ ಸರ್ಕಾರಕ್ಕಿಂತ ಅಸ್ತವ್ಯಸ್ತವಾಗಿದೆ. ವಸತಿ ಇಲಾಖೆಯಲ್ಲಿ ಒಂದು ವರ್ಗವೇ ಗುತ್ತಿಗೆ ಕೊಡಿಸುವ ಕೆಲಸ ಮಾಡುತ್ತಿದೆ. ಕೂಡಲೇ ಗುತ್ತಿಗೆದಾರರ ಸಭೆ ಕರೆಯುವಂತೆ ಸಿಎಂಗೆ ಆಗ್ರಹಿಸಿದರು.
