
ಉದಯವಾಹಿನಿ,ಅಡಿಲೇಡ್, : ಶನಿವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು 17 ರನ್‌ಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ ಸಾಧಿಸಿತು. ಇದು ಆಸ್ಟ್ರೇಲಿಯಾ ವಿರುದ್ಧ ಭಾರತದ ಎರಡನೇ ಸರಣಿ ಗೆಲುವಾಗಿದೆ. ಕೊನೆಯ ಕೊನೆಯ ಬಾರಿಗೆ 2016 ರಲ್ಲಿ ಆಸೀಸ್ ತಂಡವನ್ನು ಭಾರತ ಸೋಲಿಸಿತ್ತು. ಆಗ ಮಿಥಾಲಿ ರಾಜ್ ನೇತೃತ್ವದ ತಂಡ 2-1 ಅಂತರದಿಂದ ಜಯ ಸಾಧಿಸಿತ್ತು. ಇದೀಗ 10 ವರ್ಷದ ಬಳಿಕ ಮತ್ತೊಂದು ಸರಣಿ ಗೆದ್ದ ಸಾಧನೆ ಮಾಡಿದೆ.
ಹತ್ತು ವರ್ಷಗಳ ಹಿಂದೆ, ಪ್ರವಾಸಿ ಭಾರತ ತಂಡವು ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 10 (ಡಕ್‌ವರ್ತ್ ಲೂಯಿಸ್ ವಿಧಾನ) ಅಂತರದಿಂದ ಜಯಗಳಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ 15 ರನ್‌ಗಳ ಜಯದೊಂದಿಗೆ ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿಕೊಂಡಿತ್ತು. ಈ ಬಾರಿಯೂ ವೈಟ್‌ವಾಶ್ ಮುಖಭಂಗದಿಂದ ಪಾರಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡಿಗಸ್ ಅರ್ಧಶತಕ ಬಾರಿಸುವ ಮೂಲಕ ತಂಡ 6 ವಿಕೆಟ್‌ಗೆ 176 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 9 ವಿಕೆಟ್‌ಗೆ 159 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸ್ಪಿನ್ನರ್‌ಗಳಾದ ಶ್ರೇಯಾಂಕಾ ಪಾಟೀಲ್(22ಕ್ಕೆ3) ಮತ್ತು ಶ್ರೀ ಚರಣಿ(32ಕ್ಕೆ3) ವಿಕೆಟ್ ಕಿತ್ತು ಆಸೀಸ್ ಕುಸಿತಕ್ಕೆ ಕಾರಣರಾದರು.
