ಉದಯವಾಹಿನಿ, ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026-27ರ ತವರು ಸೀಸನ್‌ನಲ್ಲಿ ಭಾರತ ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕಾಗಿ ಒಟ್ಟು ಒಂಬತ್ತು ಏಕದಿನ ಪಂದ್ಯಗಳನ್ನು ಘೋಷಿಸಿದೆ. ಆ ಮೂಲಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಕಣ್ತುಂಬಿಸಿಕೊಳ್ಳಲು ಹೆಚ್ಚಿನ ಅವಕಾಶ ಲಭ್ಯವಾಗಲಿವೆ. ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿರುವ ಈ ಇಬ್ಬರು ಸೂಪರ್‌ಸ್ಟಾರ್ ಆಟಗಾರರು ಈಗ ಏಕದಿನ ಕ್ರಿಕೆಟ್ ಕಡೆಗೆ ಮಾತ್ರ ಗಮನಹರಿಸಿದ್ದು, ಆಫ್ರಿಕಾದಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಭಾರತ ತಂಡದ ತವರು ಋತು ತಿರುವನಂತಪುರಂನಲ್ಲಿ ಆರಂಭವಾಗಲಿದ್ದು, ಮೊದಲಿಗೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಒಟ್ಟಾರೆಯಾಗಿ, ಭಾರತ ತಂಡ ಒಂಬತ್ತು ಏಕದಿನ , ಎಂಟು ಟಿ20ಐ ಮತ್ತು ಐದು ಟೆಸ್ಟ್ ಪಂದ್ಯಗಳನ್ನು ಆಡಲು ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಈ ಟೆಸ್ಟ್ ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿದೆ. 2026-27ರ ತವರು ಸೀಸನ್‌ನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಲಿವೆ.
