ಉದಯವಾಹಿನಿ, : ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಆರಂಭವಾದ ಬಳಿಕ ಸಾಕಷ್ಟು ಬಡ ಪ್ರತಿಭೆಗಳು ಬೆಳಕೆಗೆ ಬಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್‌ಪ್ರೀತ್ ಬುಮ್ರಾ ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಅವರು ಕೂಡ ಐಪಿಎಲ್ ಟೂರ್ನಿಯ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಾಗಿದ್ದಾರೆ. ಇದೀಗ ಇವರ ಸಾಲಿಗೆ ಸೇರ್ಪಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಯುವ ವೇಗದ ಬೌಲರ್ ಮಂಗೇಶ್ ಯಾದವ್ ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಮಂಗೇಶ್ ಯಾದವ್ ಅವರು ಬಡ ಕುಟುಂಬದ ಹಿನ್ನಲೆಯಿಂದ ಬಂದಿರುವ ಆಟಗಾರ. ಇವರ ಐಪಿಎಲ್ ಪಯಣದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 5.20 ಕೋಟಿ ರು ಗಳಿಗೆ ಮಂಗೇಶ್ ಯಾದವ್ ಅವರನ್ನು ಖರೀದಿಸಿತ್ತು. ಮಧ್ಯ ಪ್ರದೇಶದ ಹಳ್ಳಿಯವರಾದ ಮಂಗೇಶ ಯಾದವ್ ಅವರ ತಂದೆ ಹೆಸರು ರಾಮ್ ಆವಾದ್ ಯಾದವ್ ಹಾಗೂ ಇವರು ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ರಾಮ್ ಆವಾದ್ ಯಾದವ್ ಅವರು, ತಮ್ಮ ಪುತ್ರನ ಕ್ರಿಕೆಟ್ ಕನಸಿಗೆ ನೀರೆರಿದಿದ್ದಾರೆ. ಕ್ರಿಕೆಟ್ ಕೋಚಿಂಗ್, ಕ್ರಿಕೆಟ್ ಸಾಮಗ್ರಿಗಳು ಸೇರಿದಂತೆ ತಮ್ಮ ಮಗನ ಕ್ರಿಕೆಟ್ ಖರ್ಚು ವೆಚ್ಚಗಳಿಗೆ ಲೋನ್ ಪಡೆದಿದ್ದಾರೆ. ಮಂಗೇಶ ಯಾದವ್ ಅವರ ಕುಟುಂಬ ಈಗಲೂ ಚಿಂದಾವರ್ ನಗರದಿಂದ 75 ಕಿಮೀ ದೂರದಲ್ಲಿರುವ ಬೋರ್ಗಾಂವ್ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.
