ಉದಯವಾಹಿನಿ, ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರು ರಾಜ್ಯದ ಕ್ರೀಡಾ ಕೋಟಾ ಯೋಜನೆಯಡಿ ಪ್ರಾದೇಶಿಕ ಕ್ರೀಡಾ ಅಧಿಕಾರಿ ಹುದ್ದೆಗೆ ನೇಮಕವಾದ ಬಳಿಕ ಬುಧವಾರ ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ) ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಎಡಗೈ ಬ್ಯಾಟ್ಸ್‌ಮನ್, ಈ ನೇಮಕಾತಿಗಾಗಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ, ಅವರಿಗೆ ನೀಡಲಾದ 3 ಕೋಟಿ ರು ಆರ್ಥಿಕ ನೆರವಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
“ನನ್ನನ್ನು ಪ್ರಾದೇಶಿಕ ಕ್ರೀಡಾ ಅಧಿಕಾರಿ ಹುದ್ದೆಗೆ ನೇಮಕ ಮಾಡಿದ ಉತ್ತರ ಪ್ರದೇಶ ಸರ್ಕಾರ ಮತ್ತು ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ,” ಎಂದು ರಿಂಕು ಸಿಂಗ್ ಹೇಳಿದ್ದಾರೆ.
26ರ ವಯಸ್ಸಿನ ಅವರು ಮಂಗಳವಾರ ನಡೆದಿದ್ದ ನೇಮಕಾತಿ ಪತ್ರ ವಿತರಣೆ ಸಮಾರಂಭಕ್ಕೆ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೋಲ್ಕತಾ ನೈಟ್ ರೈಡರ್ಸ್ ತಂಡದ ಜೊತೆಗಿನ ಕರ್ತವ್ಯದ ಕಾರಣದಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದರು. ಆದರೆ, ಶೀಘ್ರದಲ್ಲೇ ಲಖನೌಗೆ ಭೇಟಿ ನೀಡಿ ನೇಮಕಾತಿ ಪತ್ರವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದಾರೆ.
