ಉದಯವಾಹಿನಿ, ಭಾರತೀಯ ಕ್ರಿಕೆಟ್‌ನ ಯುವ ವೇಗದ ಬೌಲರ್‌ ನವದೀಪ್‌ ಸೈನಿ ಅವರು ಗಾಯಾಳು ಹರ್ಷಿತ್‌ ರಾಣಾ ಅವರ ಸ್ಥಾನಕ್ಕೆ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಹರ್ಷಿತ್‌ ರಾಣಾ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದರು. ಇದರ ಪರಿಣಾಮ ಅವರು ಚುಟುಕು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದ್ದರು. ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗದ ಕಾರಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಆರ್‌ಸಿಬಿ ವೇಗಿ ನವದೀಪ್‌ ಸೈನಿಗೆ ಕೆಕೆಆರ್‌ ಅವಕಾಶ ನೀಡಿದೆ. ಅಂದ ಹಾಗೆ ಕೆಲ ಕಾರಣಗಳಿಂದ ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ರೆಹಮಾನ್‌ ಅವರನ್ನು ಕೋಲ್ಕತಾ ಫ್ರಾಂಚೈಸಿ, ಟೂರ್ನಿಯ ಆರಂಭಕ್ಕೂ ಮುನ್ನ ರಿಲೀಸ್‌ ಮಾಡಿತ್ತು. ಇದೀಗ ಆಕಾಶ್‌ ದೀಪ್‌ ಹಾಗೂ ಮತೀಶ ಪತಿರಣ ಅವರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕೆಕೆಆರ್‌ ವೇಗದ ಬೌಲಿಂಗ್‌ ವಿಭಾಗಕ್ಕೆ ಭಾರಿ ಹಿನ್ನಡೆಯಾಗಿದೆ.

77 ಟಿ20 ಪಂದ್ಯಗಳಲ್ಲಿ 77 ವಿಕೆಟ್‌ಗಳನ್ನು ಪಡೆದಿರುವ ನವದೀಪ್‌ ಸೈನಿ, ಒಮ್ಮೆ ನಾಲ್ಕು ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ತಮ್ಮನ್ನು ಆಯ್ಕೆ ಮಾಡಿಕೊಂಡಿರುವುದನ್ನು ಕಳೆದ ರಾತ್ರಿ ಮಾತ್ರ ತಿಳಿದುಕೊಂಡೆ ಎಂದು ಅವರು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ತಾವು ಭಾವುಕನಾಗಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ಪರಿಶ್ರಮ ಒಂದು ದಿನ ಫಲ ನೀಡುತ್ತದೆ ಎಂಬ ನಂಬಿಕೆ ಸದಾ ಇತ್ತು ಎಂದು ನವದೀಪ್‌ ಸೈನಿ ಹೇಳಿದ್ದಾರೆ. ಈ ಅವಕಾಶವನ್ನು ತಾವು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದೆ ಎಂದೂ, ದೇವರ ಮೇಲಿನ ತಮ್ಮ ನಂಬಿಕೆ ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ನವದೀಪ್‌ ಸೈನಿ ನೈಟ್‌ ಕ್ಲಬ್‌ಗೆ ತಿಳಿಸಿದ್ದಾರೆ.
“ಒಂದು ರೀತಿಯಲ್ಲಿ ನೋಡಿದರೆ, ಐಪಿಎಲ್‌ಗೆ ಮರಳುತ್ತೇನೆಂದು ನನ್ನ ಮನಸ್ಸಿನಲ್ಲಿ ಈಗಾಗಲೇ ಇತ್ತು. ನಿಜ ಹೇಳಬೇಕೆಂದರೆ ನಾನು ಇದನ್ನು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದೆ ಎಂದೇ ಹೇಳಬಹುದು. ಇದು ಒಂದು ದಿನ ಖಂಡಿತವಾಗಿಯೂ ನಡೆಯುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಅತ್ಯಂತ ಮುಖ್ಯವಾದದ್ದು ದೇವರ ಮೇಲೆ ನಂಬಿಕೆ ಇಡುವುದು. ನಾನು ಅದನ್ನೇ ಮಾಡಿದ್ದೇನೆ ಮತ್ತು ಕೊನೆಗೂ ಅದು ನಡೆದಾಗ, ಅದು ಅತ್ಯಂತ ಅದ್ಭುತ ಅನುಭವವಾಗಿ ಭಾಸವಾಯಿತು,” ಎಂದು ದೆಹಲಿ ವೇಗಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!