ಉದಯವಾಹಿನಿ, ತೈವಾನ್: ಖಾನುನ್ ಚಂಡಮಾರುತದ ಭೂಮಿಗೆ ಅಪ್ಪಳಿಸಿ, ಭಾರೀ ಪ್ರಮಾಣದ ಪ್ರವಾಹದ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಇದೀಗ ರಾಜಧಾನಿ ತೈಪೆ ಸೇರಿದಂತೆ ತೈವಾನ್‌ನ ಉತ್ತರ ಭಾಗಗಳಲ್ಲಿ ಮಾ
ರುಕಟ್ಟೆಗಳು ಮತ್ತು ಶಾಲೆಗಳನ್ನು ಗುರುವಾರ ಮುಚ್ಚಲು ಆದೇಶಿಸಲಾಗಿದೆ. ಈಗಾಗಲೇ ಖಾನುನ್ ಚಂಡಮಾರುತದಿಂದಾಗಿ ಜಪಾನ್‌ನಲ್ಲಿ ೨ ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಖಾನುನ್ ಚಂಡಮಾರುತವನ್ನು ತೈವಾನ್‌ನ ಹವಾಮಾನ ಬ್ಯೂರೋ ಎರಡನೇ ಪ್ರಬಲ ಚಂಡಮಾರುತದ ಮಟ್ಟ ಎಂದು ವರ್ಗೀಕರಿಸಲಾಗಿದೆ. ಸದ್ಯ ಗಂಟೆಗೆ ೨೦೯ ಕಿಮೀ ಗರಿಷ್ಠ ಗಾಳಿಯೊಂದಿಗೆ ಚಂಡಮಾರುತವು ನಿಧಾನವಾಗಿ ಈಶಾನ್ಯ ಕರಾವಳಿಯತ್ತ ಸಾಗಿದೆ. ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ನ್ಯೂ ತೈಪೆ, ಕೀಲುಂಗ್, ಯಿಲಾನ್ ಮತ್ತು ರಾಜಧಾನಿ ತೈಪೆ ಸೇರಿದಂತೆ ಉತ್ತರ ನಗರಗಳಲ್ಲಿ ಗುರುವಾರ ವ್ಯಾಪಾರ ಮತ್ತು ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಅಲ್ಲದೆ ತೈವಾನ್‌ನ ಷೇರು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ಸಹ ಮುಚ್ಚಲಾಗಿದೆ. ಪರ್ವತಗಳಿಂದ ಕೂಡಿದ ಮಧ್ಯ ತೈವಾನ್‌ನಲ್ಲಿ ಬರೊಬ್ಬರಿ ೦.೬ ಮೀ. ವರೆಗಿನ ಒಟ್ಟು ಮಳೆಯನ್ನು ಮುನ್ಸೂಚಿಸಲಾಗಿದೆ.
