ಉದಯವಾಹಿನಿ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್ ನಲ್ಲಿ ನಾಳೆ ಸಂಜೆಯಿಂದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗುತ್ತಿದ್ದು, ರಾಜ್ಯ ಅಮೂಲ್ಯ ಸಂಪತ್ತಾದ ಮಲೆನಾಡಿನ ಪಶ್ಚಿಮ ಘಟ್ಟಗಳ ಘಮಲು ಧರೆಗಿಳಿದಿದೆ. ಮತ್ತೊಂದೆಡೆ, ೧೮ ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯ ಪ್ರತಿಕೃತಿ ಮೈದೆಳೆದಿದೆ. ಈ ಅಭೂತಪೂರ್ವ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರಲಿದೆ. ಆಗಸ್ಟ್ ೧೫ವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳೇ ಪ್ರಮುಖ ಆಕರ್ಷಣೆ. ಇಲ್ಲಿ ಸಸ್ಯ ಪ್ರಭೇದವನ್ನು ಹೊತ್ತು ತರಲಾಗಿದ್ದು, ಸಹ್ಯಾದ್ರಿಯ ೧೩೨ ಸಸ್ಯ ಪ್ರಭೇದಕ್ಕೆ ಸೇರುವ ೪೫೦ ಸಸಿಗಳನ್ನು ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಅಮೇರಿಕಾ, ಲಂಡನ್‌ನ ಕ್ಯೂ ಗಾರ್ಡನ್‌ನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ ಚಲ್ಸಿ ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‌ಬಾಗ್‌ನ ಫಲ ಪುಷ್ಪ ಪ್ರದರ್ಶನಗಳು ಜಾಗತಿಕವಾಗಿ ೩ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಅದರಂತೆ ಈಗ ೨೧೪ನೇ ಪ್ರದರ್ಶನವನ್ನು ಕಾಣುತ್ತಿರುವ ಲಾಲಾಬಾಗ್‌ನಲ್ಲಿ ೧೨ ದಿನಗಳ ಕಾಲ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದು, ಈ ಬಾರಿ ವಿಧಾನಸೌಧವೇ ಅನಾವರಣಗೊಂಡಿದೆ. ಲಾಲ್‌ಬಾಗ್‌ನ ಗಾಜಿನಮನೆಯ ಕೇಂದ್ರಭಾಗದಲ್ಲಿ ೧೮ ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯ ಪ್ರತಿಕೃತಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಪ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಪಿಂಚ್ಡ್ ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಸೇರಿದಂತೆ ಬರೋಬ್ಬರಿ ಏಳು ಲಕ್ಷ ತಾಜಾ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!