ಉದಯವಾಹಿನಿ, ಬೆಂಗಳೂರು: ಕನ್ನಡ ಚಿತ್ರರಂಗದ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಪಡೆದಿರುವ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅವರ ಚಿತ್ರ ಯಾನಕ್ಕೆ ೫೦ ವಸಂತಗಳು ತುಂಬಿವೆ.
೧೯೭೩ರಲ್ಲಿ ಸಂಕಲ್ಪ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿರಿಸಿದ ನಟ ಅನಂತ್ ನಾಗ್, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತೆಲುಗು, ಮರಾಠಿ, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದವರು. ಜೊತೆ ಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಕಲಾವಿದ.
ಬಣ್ಣದ ಬದುಕಿನಲ್ಲಿ ಸುವರ್ಣ ಮಹೋತ್ಸವದ ಆಚರಣೆ ಸಂಭ್ರಮದಲ್ಲಿರುವ ನಟ ಅನಂತ್‌ನಾಗ್ ಅವರಿಗೆ ಚಿತ್ರರಂಗದ ಹಿರಿಯ ನಟರು, ಸೇರಿದಂತೆ ಎಲ್ಲೆಡೆ ಅಭಿಮಾನದ ಶುಭ ಹಾರೈಕೆ ಹರಿದು ಬರುತ್ತಿದೆ. ಹಿರಿಯ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್, ಡಾಲಿ ಧನಂಜಯ, ನಟ ರಿಷಬ್ ಶೆಟ್ಟಿ, ಯುವ ನಟ ಧೀರೇನ್ ರಾಮ್ ಕುಮಾರ್ ಸೇರಿದಂತೆ ಅನೇಕ ಮಂದಿ ಶುಭಹಾರೈಸಿ ಹಿರಿಯ ನಟನಿಗೆ ಅಭಿಮಾನದ ಅಭಿನಂದನೆ ಸಲ್ಲಿಸಿದ್ದಾರೆ.
