
ಉದಯವಾಹಿನಿ, ರಾಮನಗರ: ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಖಾಸಗಿ ಶಿಕ್ಷ ಣ ಸಂಸ್ಥೆಗಳು ಹುಟ್ಟಿಸಿದ ಭ್ರಮಾಲೋಕದಲ್ಲಿ ಸಾರ್ವಜನಿಕರು ಸಿಲುಕಿದ್ದಾರೆ. ಪೋಷಕರ ಅವಗಣನೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಸಾರ್ವಜನಿಕರು ಸರಕಾರದ ಶಾಲೆಗಳ ಸಬಲೀಕರಣಕ್ಕೆ ಕವಿತಾರಾವ್ ಅವರು ಹೃದಯ ವೈಶಾಲ್ಯದಿಂದ ಶೈಕ್ಷಣಿಕ ಪ್ರಗತಿಗೆ ನೆರವಾಗಿರುವುದು ಅನಕರಣೀಯ ಎಂದು ತಿಳಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.ಸಮಾಜ ಸೇವಕ ವಾಸು ಪುಟ್ಟಮಾಸ್ತಿಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರೇ ದೇವರು. ಪೋಷಕರು ಸಹ ತಮ್ಮ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ ಕೃಷ್ಣಾಪುರದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಟ್ರಸ್ಟ್ ವತಿಯಿಂದ ದತ್ತು ತೆಗೆದುಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕಾಂತರಾಜು, ನೇ.ರ. ಪ್ರಭಾಕರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಮಾದು, ಟಾಟಾ ಕಂಪನಿಯ ಐಕ್ಯೂ ವಿಭಾಗದ ಮೇನೆಜರ್ ಹರೀಶ್ ಜಾಧವ್, ನೃತ್ಯ ಕಲಾವಿದೆ ಕಾವ್ಯಾರಾವ್, ಕ್ಷಿತಿ ಜಾಧವ್, ಗಾಯಕಿ ಚಿತ್ರರಾವ್, ಶಾಲೆಯ ಮುಖ್ಯಶಿಕ್ಷಕಿ ರೋಜಾರಾಣಿ, ಶಿಕ್ಷಕರಾದ ರಾಜಶೇಖರ ಪಾಟೀಲ್, ಉಷಾ, ನಾಗರತ್ನ, ರಾಜಶೇಖರ್ ಇತರರು ಇದ್ದರು.
