
ಉದಯವಾಹಿನಿ ಚಿತ್ರದುರ್ಗ: ಯೋಗ ಭಾರತದ ಸಂಸ್ಕೃತಿ ಯೋಗ ಮತ್ತು ಧ್ಯಾನದ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಸಲು ಶತಮಾನಗಳಿಂದ ಜನರು ಇದನ್ನು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಯೋಗ ಎಲ್ಲಾ ವಯಸ್ಸಿನ ಜನರಿಗೆ ಮನಸ್ಸು ಮತ್ತು ದೇಹವನ್ನು ಸದೃಢವಾಗಿಸಲು ಸಹಾಯ ಮಾಡುತ್ತದೆ. ಶಾಲಾ ಮಕ್ಕಳು ಬಾಲ್ಯದಲ್ಲೇ ಯೋಗವನ್ನು ರೂಢಿಸಿಕೊಂಡರೆ ಶೈಕ್ಷಣಿಕ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿ ಕಾಣಬಹುದು ಎಂದು ಯೋಗ ಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ಸರ್ಕಾರಿ ಆಯುಷ್ ಆಯುರ್ವೇದ ಚಿಕಿತ್ಸಾ ಕೇಂದ್ರ ಜೆ ಎನ್ ಕೋಟೆ ವತಿಯಿಂದದಿನಾಂಕ 12ನೇ ಆಗಸ್ಟ್ 2023ರ ಶನಿವಾರ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿದ್ದ ಯೋಗ ತರಬೇತಿ ಶಿಬಿರದಲ್ಲಿ ತರಬೇತಿ ನೀಡಿ ಮಾತನಾಡುತ್ತಾ “ಬಾಲ್ಯದಿಂದಲೇ ಯೋಗ ಮಾಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯೋಗದ ಮೂಲಕ ಮಕ್ಕಳು ಲಘು ವ್ಯಾಯಾಮ ಮಾಡಿ ಫಿಟ್ ಆಗಿರುತ್ತಾರೆ. ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುವಂತೆ ಮಾಡುತ್ತದೆ ಆದ್ದರಿಂದ ಪ್ರತಿದಿನ ಯೋಗಭ್ಯಾಸ ಮಾಡಿ” ಎಂದು ತಿಳಿಸಿದರು. ಶಿಬಿರದಲ್ಲಿ ಮಕ್ಕಳನ್ಜುದ್ಧೇಶಿಸಿ ಮಾತನಾಡಿದ ಶಾಲೆಯ ದೈಹಿಕ ಶಿಕ್ಷಕ ಮಲ್ಲೇಶ್ ಹೆಚ್ ಎಲ್ ಮಾತನಾಡಿ ” ಇತ್ತೀಚಿನ ದಿನಗಳಲ್ಲಿ ಕಲುಷಿತ ವಾತಾವರಣದ ಜೊತೆಗೆ ಬೇಕರಿ ಪದಾರ್ಥಗಳಂತಹ ಆಹಾರ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿರುವುದರಿಂದ ರೋಗಾಣುಗಳೊಂದಿಗೆ ಹೋರಾಡಲು ಪ್ರತಿಯೊಬ್ಬರೂ ಯೋಗದ ಮೊರೆಹೋಗುವುದು ಅವಶ್ಯ ಅದೇ ರೀತಿ ಜೆ ಎನ್ ಕೋಟೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾ ಕೇಂದ್ರದ ವತಿಯಿಂದ ಗ್ರಾಮೀಣ ಶಾಲಾ ಮಕ್ಕಳಿಗಾಗಿ ಇತ್ತೀಚೆಗೆ ಆಯೋಜಿಸುತ್ತಿರುವ ಯೋಗ ಶಿಬಿರಗಳು ಗ್ರಾಮದ ಜನರ ಆರೋಗ್ಯ ಸುಧಾರಣೆಗೆ ಉಪಯುಕ್ತವಾಗಿದೆ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಯೋಗ ತರಬೇತಿ ನಂತರ ಶಾಲಾ ಮಕ್ಕಳ ಸಹಯೋಗದೊಂದಿಗೆ ಗ್ರಾಮದಲ್ಲಿ ನಡೆಸಲಾದ ಯೋಗ ಜಾಗೃತಿ ಜಾಥದಲ್ಲಿ ಮಕ್ಕಳು ” ಯೋಗ ಮಾಡಿ ನಿರೋಗಿಗಳಾಗಿ, ಯೋಗವೇ ಜೀವನ ” ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಸೋಮಣ್ಣ ಆರ್, ನಿರ್ಮಲ ಬಿ, ಹನುಮಂತಪ್ಪ ಎನ್., ತಿಪ್ಪೇರುದ್ರಸ್ವಾಮಿ ಬಿ., ಮಲ್ಲಿಕಾರ್ಜುನ ಅಜ್ಜಂಪುರ, ನಾಗವೇಣಿ ಟಿ.ಎನ್., ಆಶಾರಾಣಿ ಟಿ.ಆರ್., ಮಂಜುನಾಥ್ ಎನ್ ಇನ್ನಿತರರು ಜಾಥದಲ್ಲಿ ಭಾಗವಹಿಸಿದ್ದರು.
