ಉದಯವಾಹಿನಿ, ನೇರಳೆಹಣ್ಣು ತಿನ್ನಲು ರುಚಿಕರವಾಗಿದ್ದು, ಒಗರು ಹಾಗೂ ಸಿಹಿ, ಹುಳಿರಸದಿಂದ ಕೂಡಿರುವುದು. ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿರುವುದು ಎಲ್ಲರಿಗೂ ತಿಳಿದಿಲ್ಲ. ಇದರ ಎಲೆ, ತೊಗಟೆ, ಹಣ್ಣು ಹಾಗೂ ಹಣ್ಣಿನೊಳಗೆ ಇರುವ ಬೀಜ ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಇದು ಪಿತ್ತವನ್ನು ಶಮನ ಮಾಡಿ, ಉಷ್ಣ ಪ್ರಕೃತಿಯವರಿಗೆ ಹಿತಕರವಾಗುತ್ತದೆ. ಹೃದಯ ಮತ್ತು ರಕ್ತದಲ್ಲಿ ಸೇರಿರುವ ಉಷ್ಣತೆಯನ್ನು ತಗ್ಗಿಸಿ, ಹೊಟ್ಟೆಯಲ್ಲಿರುವ ಕೆಟ್ಟವಾಯುವನ್ನು ಹೋಗಲಾಡಿಸುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಹಾಗೂ ಗಂಟಲು ನೋವು ಇರುವವರು ಉಪಯೋಗಿಸುವುದು ಒಳ್ಳೆಯದಲ್ಲ. ೧. ಅತಿಸಾರ: ನೇರಳೆ ಮರದ ಚಕ್ಕೆಯ ಕಷಾಯದಿಂದ ಅತಿಸಾರ ವಾಸಿಯಾಗುತ್ತದೆ. ೨. ಗಂಟಲಿನ ಹುಣ್ಣು, ನೋವು: ಗಂಟಲಿನ ಹುಣ್ಣು ಇರುವವರು ಇದೇ ಕಷಾಯವನ್ನು ಮಾಡಿ ಬಾಯಿಮುಕ್ಕಳಿಸುವುದರಿಂದ ಗಂಟಲಿನ ಹುಣ್ಣು, ನೋವು ಕಡಿಮೆಯಾಗುತ್ತದೆ. ೩. ರಕ್ತಭೇದಿಗೆ: ಚಿಗುರು ಎಲೆಗಳನ್ನು ಅರೆದು ಆಡಿನ ಹಾಲಿನಲ್ಲಿ ಕದಡಿ ಕುಡಿಯುವುದರಿಂದ ರಕ್ತಭೇದಿಯು ಕಡಿಮೆಯಾಗುತ್ತದೆ. ೪. ಚೇಳಿನ ವಿಷಕ್ಕೆ : ಎಲೆಗಳನ್ನು ಜಜ್ಜಿ, ಚೇಳುಕಚ್ಚಿದ ಜಾಗಕ್ಕೆ ಲೇಪಿಸುವುದರಿಂದ ವಿಷವು ಇಳಿಯುತ್ತದೆ.
೫. ಭೇದಿಗೆ: ನೇರಳೆ ಹಣ್ಣಿನ ರಸದಿಂದ ಮಾಡಿದ ಷರಬತ್ತು ಭೇದಿಗೆ ಒಳ್ಳೆಯ ರಾಮಬಾಣ. ೬. ಸುಟ್ಟಗಾಯದ ಕಲೆಗಳಿಗೆ: ನೇರಳೆ ಎಲೆಗಳನ್ನು ಅರೆದು ಹಚ್ಚುವುದರಿಂದ ಸುಟ್ಟಗಾಯದ ಕಲೆಗಳು ಕಡಿಮೆಯಾಗುತ್ತದೆ.
೭. ವಾಂತಿಗೆ: ನೇರಳೆಹಣ್ಣಿನ ರಸ ಹಾಗೂ ಅತಿಮಧುರ ಚೂರ್ಣವನ್ನು ಬೆರೆಸಿ ಸೇವಿಸಿದರೆ ವಾಂತಿ ವಾಸಿಯಾಗುತ್ತದೆ.
೮. ಬೆವರಿನ ದುರ್ಗಂಧಕ್ಕೆ : ವಿಪರೀತ ಬೆವರುವವರು ನೇರಳೆ ಎಲೆಯನ್ನು ಅರೆದು ಅದನ್ನು ನೀರಿಗೆ ಮಿಶ್ರಣ ಮಾಡಿ ಸ್ನಾನ ಮಾಡಿದರೆ ಶರೀರದ ದುರ್ಗಂಧ ಹೋಗುತ್ತದೆ.
೯. ಅಂಗೈ, ಅಂಗಾಲು ಉರಿ, ಮೂಲವ್ಯಾಧಿಗೆ: ಈ ರೋಗ ಇರುವವರು ಊಟಕ್ಕೆ ಮುಂಚೆ ನೇರಳೆಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಗುಣಕಾಣುತ್ತದೆ.
೧೦. ಹಲ್ಲುಗಳಿಂದ ರಕ್ತಸ್ರಾವ: ನೇರಳೆ ಮರದ ಎಳೆಯ ಚಿಗುರೆಲೆಗಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುಗಳಲ್ಲಿ ಉಂಟಾಗುವ ರಕ್ತಸ್ರಾವವನ್ನು ತಡೆಯುತ್ತದೆ.

Leave a Reply

Your email address will not be published. Required fields are marked *

error: Content is protected !!