
ಉದಯವಾಹಿನಿ ರಾಮನಗರ: ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಬಂದ ನಂತರ ನಡೆದಿರುವ ಅಭಿವೃದ್ಧಿಯನ್ನು ಜನ ಹೇಳುತ್ತಾರೆ. ಇವರಿಂದ ಮೆಚ್ಚುಗೆ ಬೇಕಾಗಿಲ್ಲ. ಮೂರು ಬಾರಿ ಸಂಸದರಾಗಿ ನೀವು ಏನು ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಅವರು ಸಂಸದ ಡಿ.ಕೆ.ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಸುಳ್ಳು ಹೇಳಿ, ಸ್ಮಾರ್ಟ್ ಕಾರ್ಡ್ ನೀಡಿ ಮತ ಪಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ನೈಸ್ ರಸ್ತೆ ವಿಚಾರವಾಗಿ ಮಾಜಿ ಸಿಎಂ ಎಚ್ಡಿಕೆ ಅವರ ಹೋರಾಟದ ಬಗ್ಗೆ ಪ್ರಶ್ನಿಸಿರುವ ನೀವು ಸದನದಲ್ಲಿ ಏಕೆ ವಿಚಾರ ಪ್ರಸ್ತಾಪಿಸಿಲ್ಲ. ಸರ್ಕಾರ ಬಂದು ನೂರು ದಿನ ಕಳೆದಿದೆ. ಏನು ಕೆಲಸ ಮಾಡಿದ್ದೀರಿ ಎಂದು ತೋರಿಸಿ. ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕೆ ಎಷ್ಟು ಹಣ ತರಲಾಗಿದೆ ಎಂದು ಜನರಿಗೆ ತಿಳೀಸಿ ಎಂದು ಒತ್ತಾಯಿಸಿದರು. ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲು ಜೆಡಿಎಸ್ ಸಿದ್ದವಾಗಿದೆ. ಸರ್ಕಾರದ ವಿರುದ್ಧ ಎಚ್ಡಿಕೆ ಮಾತನಾಡಿದರೆ ನಿಮಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ರಾಮನಗರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಎಷ್ಟು ಸರಿ. ರಾಮನಗರದಲ್ಲಿ ಬೆಂಗಳೂರು ಡೇರಿ ಘಟಕ ಪ್ರಾರಂಭಕ್ಕೆ ಒಂದು ಎಕರೆಗೆ ಎರಡು, ಮೂರು ಲಕ್ಷ ಇದ್ದ ಜಮೀನಿಗೆ 56 ಲಕ್ಷ ಪಡೆದುಕೊಂಡಿದ್ದೀರಿ ಇದು ರೈತರ ಹಣವಲ್ಲವೇ, ಇದು ಮಾಡುತ್ತಿರುವ ಹಗಲು ದರೋಡೆ ಅಲ್ಲವೇ ಎಂದು ಪ್ರಶ್ನಿಸಿದರು.ಪೊಲೀಸರನ್ನು ಉಪಯೋಗಿಸಿಕೊಂಡು ಬೆಂಗಳುರು ಮೈಸೂರು ಹೈವೆ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಅವಕಾಶ ನೀಡುತ್ತಿಲ್ಲ. ಈ ಭಾಗದ ಸಂಸದರಾಗಿ ಹೈವೆ ಅವ್ಯವಸ್ಥೆ ವಿರುದ್ಧ ಒಂದು ದಿನವೂ ಹೋರಾಟ ಮಾಡಲಿಲ್ಲ ಎಂದು ಕಿಡಿಕಾರಿದರು.ಜೆಡಿಎಸ್ ಮುಖಂಡರಾದ ರಾಜಶೇಖರ್, ದೊರೆಸ್ವಾಮಿ, ನಾಗರಕಲ್ಲುದೊಡ್ಡಿ ಶಿವಣ್ಣ, ಜೈಕುಮಾರ್, ನರಸಿಂಹಮೂರ್ತಿ, ಪಾಂಡುರಂಗ, ಗೂಳಿಕುಮಾರ್, ರೈಡ್ ನಾಗರಾಜ್, ಎ.ಆರ್.ಮಂಜುನಾಥ್, ಸಪ್ಪಗೆರೆ ಶಿವಲಿಂಗಯ್ಯ, ಹೊಟೇಲ್ ಉಮೇಶ್ ಇದ್ದರು.
