
ಉದಯವಾಹಿನಿ ರಾಮನಗರ: ತಳ ಸಮುದಾಯವನ್ನು ಮೇಲಕ್ಕೆ ತರುವಲ್ಲಿ ಮತ್ತು ಮಹಿಳೆಯರಿಗೆ ವಿದ್ಯಾಭ್ಯಾಸ ದೊರಕಿಸಿಕೊಡಲು ದಿವಂಗತ ಡಿ.ದೇವರಾಜು ಅರಸು ರವರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಅಭಿಪ್ರಾಯ ಪಟ್ಟರು.ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶ್ರೀ ಡಿ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶವನ್ನು ದೊರಕಿಸಿಕೊಡಲು ಹೋರಾಟ ನಡೆಸಿದರಲ್ಲಿ ದೇವರಾಜ ಅರಸು ಅವರು ಮೇಲ್ಪಂತಿಯಲ್ಲಿ ನಿಲ್ಲುತ್ತಾರೆ ಅವರ ಆದರ್ಶ ಅವರ ಹೋರಾಟ ಇಂದಿನ ಯುವ ಸಮುದಾಯ ಯುವ ಸಮುದಾಯಕ್ಕೆ ಮತ್ತು ಸಮಾಜ ಚಿಂತಕರಿಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ,ದಲಿತ ವರ್ಗದವರ, ಹಿಂದುಳಿದ ವರ್ಗದವರ ಹಾಗೂ ಅಲ್ಪ ಸಂಖ್ಯಾತರ ಉದ್ದಾರಕರು. ಈ ಹಿಂದೆ ಅನೇಕ ನಾಯಕರು ರಾಜ್ಯದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ದಿವಂಗತ ಡಿ.ದೇವರಾಜು ಅರಸು ರವರು 1969- 1979 ರವರೆಗೆ 10 ವರ್ಷಗಳ ಕಾಲ ನಡೆಸಿದ ಆಡಳಿತ ಅರಸು ಯುಗ ವಾಗಿತ್ತು ಎಂದರು.
ದಿವಂಗತ ಡಿ.ದೇವರಾಜ ಅರಸು ರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ, ಮುಖ್ಯವಾಗಿ ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಉಳುವುವನೇ ಭೂ ಒಡೆಯ. ಇದರಿಂದ ಭೂಮಿ ಇಲ್ಲದವರಿಗೆ ಭೂಮಿ ದೊರಕಿತು. ಬಡವರಿಗೆ ನ್ಯಾಯ ಸಿಕ್ಕಿತು ನಿವೇಶನ ರಹಿತರಿಗೆ ನಿವೇಶನಗಳು ದೊರೆತವು, ಅನೇಕ ಬಡ ಮತ್ತು ಮಧ್ಯಮ ವರ್ಗದವರಿಗೆ ಸ್ವಂತ ಮನೆ ಪಡೆಯಲು ಅವಕಾಶ ಕಲ್ಪಿಸಿದಂತಾಯಿತು ಎಂದರು.
ಪ್ರಧಾನ ಭಾಷಣಕಾರರಾದ ಮಾರಣ್ಣನವರು ಮಾತನಾಡಿ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವಲ್ಲಿ ದಿವಂಗತ ಡಿ.ದೇವರಾಜು ಅರಸು ರವರ ಪಾತ್ರ ದೊಡ್ಡದು, ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ಕಾಣಲು ಕಾರಣರಾದರು. ಮೀಸಲಾತಿ ವಿಸ್ತರಣೆ ತಂದರು, ಭೂಸುಧಾರಣೆ ಕಾಯ್ದೆ, ಜೀತಮುಕ್ತಿ ಪದ್ದತಿ, ಕೃಷಿ, ಹೈನುಗಾರಿಕೆಯಲ್ಲಿ ಹೀಗೆ ಅನೇಕ ಸುಧಾರಣೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ತಂದರು ಎಂದರು. ವರುಣ ನಾಲೆಯಲ್ಲಿ ನೀರು ಹರಿಸಲು ಕ್ರಮಕೈಗೊಂಡಾಗ ಮಂಡ್ಯ ಜನರು ವಿರೋಧ ವ್ಯಕ್ತಪಡಿಸಿದ್ದರು ವರುಣ ನಾಲೆಯಲ್ಲಿ ನೀರು ಹರಿದ ನಂತರ ಅದೇ ಜನರು ಇವರನ್ನು ಸನ್ಮಾಸಿದರು. ದೀನ ದಲಿತರ ಉದ್ದಾರಕ, ಹಿಂದುಳಿದ ವರ್ಗಗಳ ಅಭಿವೃದ್ಧಿಕಾರಕ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ತನುಶ್ರೀ, ಕು. ಶ್ರೀಲಕ್ಷ್ಮಿ ಮತ್ತು ಕು. ಲಿಖಿತ ಹಾಗೂ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿ. ನಾಗರಾಜ್ (ರೈಡ್) , ಟಿ.ವಿ.ನಾರಾಯಣ್, ವೆಂಕಟಸ್ವಾಮಿ, ಆರ್.ರಂಗಪ್ಪ, ಹೆಚ್. ಸುರೇಶ್, ಎ.ಹೆಚ್. ಬಸವರಾಜು, ಪ್ರಭಾಕರ್, ಟಿ.ವಿ. ಸೀತರಾಮು, ಬಿ.ರಂಗನಾಥ್, ಮತ್ತು ಆರ್.ವಿ. ಸುರೇಶ್ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ರಾಮನಗರ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆವಿಗೂ ದಿವಂಗತ ಡಿ.ದೇವರಾಜ ಅರಸು ರವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮುಖಂಡರುಗಳಾದ ಉಮೇಶ್, ತಗಡಾಚಾರ್, ಮಾಗಡಿ ಜಯರಾಮ್ , ಬಿಡದಿ ಶಂಕರ್ , ವೆಂಕಟಸ್ವಾಮಿ ಹಾಗೂ ಇನ್ನು ಅನೇಕ ಮುಖಂಡರುಗಳು ಮತ್ತು ಸಿಇಒ ದಿಗ್ವಿಜಯ್ ಬೋಡ್ಕೆ, ನೌಕರರ ಸಂಘದ ಅಧ್ಯಕ್ಷ ಸತೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್ ಹಾಗೂ ಇತರರು ಭಾಗವಹಿಸಿದ್ದರು.
