
ಉದಯವಾಹಿನಿ ದೇವದುರ್ಗ : ರಾಜ್ಯ ಸರಕಾರ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿಸಿ,ಅಗತ್ಯ ಸೌಲಭ್ಯಗಳನ್ನು ಜಾರಿಗೊಳಿಸಬೇಕು.ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇರುವದರಿಂದ ವಾರಬಂಧಿ ಕೈಬಿಟ್ಟು ನಿರಂತರ ನೀರು ಬಿಡಲು ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ ಬಣ) ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸಂಘಟನೆ ಪದಾಧಿಕಾರಿಗಳಾದ ಮರಿಲಿಂಗ ಪಾಟೀಲ್,ಬಾಬು ಗೌರಂಪೇಟ,ಆದರ್ಶನಾಯಕ ಜಂಟಿ ಸುದ್ದಿಗೋಷ್ಠಿ ನಡೆಸಿ,ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗುವ ಲಕ್ಷಣಗಳಿವೆ.ಬೀಜ-ಗೊಬ್ಬರಗಳಿಗೆ ಖರ್ಚು ಮಾಡಿಕೊಂಡು ರೈತರು ಸಂಕಷ್ಟದಲ್ಲಿದ್ದಾರೆ.ನಾರಾಯಣಪೂರ ಬಲದಂಡೆ ನಾಲೆ ನೀರು ಬಿಡಲು ನೀರಾವರಿ ಇಲಾಖೆ ಅವೈಜ್ಞಾನಿಕ ವಾರಾಬಂಧಿ ಜಾರಿಗೊಳಿಸಿ ರೈತರೊಡನೆ ಚೆಲ್ಲಾಟವಾಡುತ್ತಿದೆ. ತಾಲೂಕಿನಲ್ಲಿ ನಿಗದಿತ ಪ್ರಮಾಣದ ಮಳೆ ಅಗಲಿಲ್ಲ.ನಾರಾಯಣಪೂರ ಬಲದಂಡೆ ನಾಲೆ ನೀರು ಕೂಡ ಜಮೀನುಗಳಿಗೆ ಸಕಾಲಕ್ಕೆ ಲಭ್ಯವಾಗದೇ ಇರುವದರಿಂದ ರೈತರು ಸಂಕಷ್ಠದಲ್ಲಿದ್ದು,ರಾಜ್ಯ ಸರಕಾರ ಕೂಡಲೇ ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕೆಂದು. ತಾಲೂಕಿನಲ್ಲಿ ಕೆಲ ಗೊಬ್ಬರದ ಅಂಗಡಿ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದು,ನಕಲಿ ಕ್ರಿಮಿನಾಶಕ ಔಷಧಿಗಳನ್ನು,ನಕಲಿ ಗೊಬ್ಬರವನ್ನು ಮಾರಾಟ ಮಾಡುವ ಜಾಲವಿದೆ.ವಿಷಯ ತಿಳಿದರೂ ಕೃಷಿ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದು,ಅವರೂ ಕೂಡ ಶಾಮೀಲಾಗಿದ್ದಾರೆ.ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತನಿಖಾ ತಂಡ ನಿಯೋಜಿಸಿ ಸೂಕ್ತ ಕ್ರಮಗೊಳ್ಳಬೇಕೆಂದು ರೈತ ಸಂಘಟನೆ ಪದಾಧಿಕಾರಿಗಳಾದ ಮರಿಲಿಂಗ ಪಾಟೀಲ್,ಬಾಬೂ ಗೌರಂಪೇಟ,ಆದರ್ಶನಾಯಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಮ್ಮನಗೌಡ,ರಮೇಶ ನಾಯಕ,ಬಸವರಾಜ ತಾತಾ,ರಮೇಶ ರಾಠೋಡ,ನಾಗರಾಜ ಇದ್ದರು.
