ಉದಯವಾಹಿನಿ ಕೆ.ಆರ್.ಪೇಟೆ: ಕಾರ್ಯಕರ್ತನ ಹರಕೆ ತೀರಿಸಿದ ಶಾಸಕ ಹೆಚ್.ಟಿ.ಮಂಜು. ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್.ಟಿ.ಮಂಜು ಗೆದ್ದು ಬಂದರೆ ಶ್ರೀಕ್ಷೇತ್ರ ಸಾಸಲು ಶ್ರೀಶಂಭುಲೀಗೇಶ್ವರಸ್ವಾಮಿ, ಶ್ರೀ ಸೋಮೇಶ್ವರಸ್ವಾಮಿ ಹಾಗೂ ಶ್ರೀಕುದುರೆಮಂಡಮ್ಮದೇವಿ ಸನ್ನಿಧಾನದಲ್ಲಿ ಗಾಣ ಆಡಿಸಿ ಗಾಣದಿಂದ ಬಂದ ಎಳ್ಳೆಣ್ಣೆಯನ್ನು ಭಗವಂತನಿಗೆ ಸಮರ್ಪಿಸಿ ವಿಶೇಷ ಪೂಜೆ ಮಾಡಿಸುವುದಾಗಿ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಯಲ್ಲಾದಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಪಟೇಲ್‌ಮಹದೇವ್ ಎಂಬುವವರು ಹರಕೆ ಹೊತ್ತಿದ್ದರು ಅದರಂತೆ ಬುಧವಾರ ಸಾಸಲು ಶ್ರೀಕ್ಷೇತ್ರದಲ್ಲಿ ಶಾಸಕ ಹೆಚ್.ಟಿ.ಮಂಜುರವರನ್ನು ಆಹ್ವಾನಿಸುವ ಮೂಲಕ ಸ್ವಾಮಿಯ ಸನ್ನಿಧಾನದಲ್ಲಿ ಗಾಣಕ್ಕೆ ಎಳ್ಳನ್ನು ಹಾಕಿ ಶಾಸಕರೊಂದಿಗೆ ಗಾಣ ಎಳೆದು ಗಾಣದಿಂದ ಬಂದ ಎಳ್ಳೆಣ್ಣೆಯನ್ನು ಭಗವಂತನಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ಒಪ್ಪಿಸಿಕೊಳ್ಳುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಹಾಗೂ ದೇವೇಗೌಡ ಮತ್ತು ಕುಮಾರಣ್ಣನ ಕಟ್ಟಾ ಅಭಿಮಾನಿಗಳು ಸಾಕಷ್ಟಿದ್ದು ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರು ೨೦೨೩ ರ ಚುನಾವಣೆಯನ್ನು ಅತ್ಯಂತ ಪ್ರತಿಷ್ಟೆಯಾಗಿ ತೆಗೆದುಕೊಂಡು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವಂತೆ ಮಾಡಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಐನೋರಹಳ್ಳಿಮಲ್ಲೇಶ್ ರವರ ಆಪ್ತರಾಗಿರುವ ಯಲ್ಲಾದಹಳ್ಳಿಮಹದೇವ್ ಇಂದು ಅವರ ಹರಕೆ ತೀರಿಸಲು ನನಗೆ ಕರೆ ಮಾಡಿದ್ದು ಸಂತೋಷದಿ0ದ ಆಗಮಿಸಿ ಹರಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಉತ್ತಮ ಮಳೆ, ಬೆಳೆ ಆಗಿ ರೈತರು ಸಂತೋಷದಿ0ದ ಇರಲೆಂದು ಭಗವಂತನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಯಲ್ಲಾದಹಳ್ಳಿ ಮಹದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿಮಲ್ಲೇಶ್, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಕಿಕ್ಕೇರಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಶೇಖರ್, ಆನೆಗೊಳಶೇಖರ್ ಸೇರಿದಂತೆ ಸಾಸಲು, ಸಾಸಲುಕೊಪ್ಪಲು, ಯಲ್ಲಾದಹಳ್ಳಿ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!