
ಉದಯವಾಹಿನಿ, ನ್ಯೂಯಾರ್ಕ್: ಅಮೆರಿಕಾದಲ್ಲಿ ಮುಂದೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಹಲವು ನಾಯಕರು ಇದೀಗ ತಮ್ಮ ವರ್ಚಸ್ಸು ಹೆಚ್ಚಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಒಂದು ವೇಳೆ ತಾನು ಅಧ್ಯಕ್ಷನಾಗಿ ಆಯ್ಕೆಗೊಂಡರೆ ಯಾವ ರೀತಿಯ ರಣನೀತಿಗಳನ್ನು ರೂಪಿಸಲಿದ್ದೇನೆ ಎಂಬ ಬಗ್ಗೆ ವಿವೇಕ್ ಅವರು ಮಾಹಿತಿ ನೀಡಿದ್ದು, ಒಪ್ಪಂದದ ಬಗ್ಗೆ ಕೂಡ ತಿಳಿಸಿದ್ದಾರೆ.
ಈ ಬಗ್ಗೆ ಅಮೆರಿಕಾದ ಫಾಕ್ಸ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ವಿವೇಕ್, ರಷ್ಯಾವು ಸಂಪೂರ್ಣವಾಗಿ ಚೀನಾದ ಮಡಿಲಿಗೆ ಹೋಗದಂತೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ನಾನು ರಷ್ಯಾ ಜೊತೆ ಒಪ್ಪಂದ ನಡೆಸಲಿದ್ದೇನೆ. ಸದ್ಯದ ರಷ್ಯಾ ಹಾಗೂ ಉಕ್ರೇನ್ ನಡುವಿನ ನಿಯಂತ್ರಣ ರೇಖೆಗಳನ್ನು ನಿಶ್ಚಲವನ್ನಾಗಿ ಮಾಡಲಿದ್ದೇನೆ. ಅಲ್ಲದೆ ಉಕ್ರೇನ್ ಅನ್ನು ನ್ಯಾಟೋಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುತ್ತೇನೆ. ರಷ್ಯಾ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು. ಆದರೆ ಇದಕ್ಕಾಗಿ ರಷ್ಯಾವು ಚೀನಾ ಜೊತೆಗಿನ ಮಿಲಿಟರಿ ಮೈತ್ರಿಯನ್ನು ತೊರೆಯಬೇಕು. ಇಂದು ಪಾಶ್ಚಿಮಾತ್ಯ ದೇಶಗಳನ್ನು ನಾವು ತಪ್ಪಾಗಿ ರಷ್ಯಾದಿಂದ ದೂರ ಇರಿಸಿದ್ದೇವೆ. ಹಾಗಾಗಿ ರಷ್ಯಾ ಅನಿವಾರ್ಯವಾಗಿ ಚೀನಾದ ಮಡಿಲಿಗೆ ಬಿದ್ದಂತಾಗಿದೆ. ಹಾಗಾಗಿ ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾವನ್ನು ಜೋಡಿಸಿದರೆ ಚೀನಾದೊಂದಿಗಿನ ಪಾಲುದಾರಿಕೆ ಕಡಿಮೆಯಾಗಲಿದೆ. ಚೀನಾದ ಗಡಿ ಪ್ರದೇಶಗಳನ್ನು ಹಂಚಿಕೊಂಡಿರುವ ಭಾರತ ಹಾಗೂ ವಿಯೆಟ್ನಾಂ ಎರಡೂ ದೇಶಕ್ಕೂ ರಷ್ಯಾ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಈಶಾನ್ಯ ಚೀನಾದಲ್ಲಿ ರೈಲುಮಾರ್ಗವನ್ನು ನಿರ್ಮಿಸಲು ಚೀನಾ ಬಯಸುತ್ತಿದೆ. ಆದರೆ ರಷ್ಯಾ ಇದಕ್ಕೆ ಆಸ್ಪದ ನೀಡುವ ಸಾಧ್ಯತೆ ಕಡಿಮೆ. ಹಾಗಾಗಿ ಇವೆರಡು ದೇಶಗಳ ನಡುವೆ ಬಿರುಕು ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
