ಉದಯವಾಹಿನಿ, ಲಂಡನ್: ಒಂದೆಡೆ ಹಲವು ದೇಶಗಳೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ನಿರತರಾಗಿರುವ ಭಾರತ, ಸದ್ಯ ಬ್ರಿಟನ್ ಜೊತೆಗಿನ ಒಪ್ಪಂದದ ಚರ್ಚೆ ಅಂತಿಮದಲ್ಲಿದೆ ಎನ್ನಲಾಗಿದೆ. ಇದರ ನಡುವಲ್ಲೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿಕೆ ನೀಡಿದ್ದು, ತಮ್ಮ ದೇಶಕ್ಕೆ ಲಾಭವಾದರೆ ಮಾತ್ರ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ೨೦ ಶೃಂಗಸಭೆಗಾಗಿ ಭಾರತಕ್ಕೆ ಪ್ರಯಾಣಿಸುವ ಮುನ್ನ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಸುನಕ್, ಬ್ರಿಟನ್‌ಗೆ ಲಾಭವಾದರೆ ಮಾತ್ರ ಭಾರತದ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ತಾನು ಸಮ್ಮತಿಸುತ್ತೇನೆ. ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿವೆ. ಆದರೆ ಸಂಪೂರ್ಣ ಬ್ರಿಟನ್‌ಗೆ ಪ್ರಯೋಜನವಾಗುವ ವಿಧಾನವನ್ನು ಮಾತ್ರ ತಾನು ಒಪ್ಪುತ್ತೇನೆ ಎಂದು ಅವರು ತಿಳಿಸಿದ್ದಾರೆ. ರಫ್ತು ಹೆಚ್ಚಳವನ್ನು ಎದುರು ನೋಡುತ್ತಿರುವ ಭಾರತಕ್ಕೆ ಬ್ರಿಟನ್ ಜತೆಗಿನ ವ್ಯಾಪಾರ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ, ಯುರೋಪಿಯನ್ ಯೂನಿಯನ್‌ನಿಂದ ಹೊರಬಂದಿರುವ ಬ್ರಿಟನ್‌ಗೂ ತನ್ನ ಲಕ್ಸುರಿ ಕಾರುಗಳು, ವಿಸ್ಕಿ, ಕಾನೂನು ಸೇವೆಗಳಿಗೆ ಸಂಬಂಧಿಸಿದ ವ್ಯಾಪಾರ ವಿಸ್ತರಿಸುವ ಅವಕಾಶ ಇದಾಗಿದೆ. ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಬೌದ್ಧಿಕ ಆಸ್ತಿ ಹಕ್ಕುಗಳು(ಪೇಟೆಂಟ್), ಮೂಲದ ನಿಯಮಗಳು(ರೂಲ್ಸ್ ಆಫ್ ಒರಿಜಿನ್) ಮತ್ತು ಹೂಡಿಕೆ ಒಪ್ಪಂದ ಸೇರಿದಂತೆ ಕೆಲವು ಅಂಶಗಳ ಬಗ್ಗೆ ಉಭಯ ದೇಶಗಳ ನಿಯೋಗಗಳ ಮಧ್ಯೆ ಇನ್ನೂ ಚರ್ಚೆ ನಡೆಯುತ್ತಿದೆ. ಬ್ರೆಕ್ಸಿಟ್‌ನಿಂದ ಯುರೋಪಿಯನ್ ಯೂನಿಯನ್‌ನಿಂದ ಹೊರಬಂದ ಬಳಿಕ ಬ್ರಿಟನ್ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಆರ್ಥಿಕತೆ ಕೂಡ ಕುಸಿತಗೊಂಡಿದೆ. ಅಲ್ಲದೆ ಯೂನಿಯನ್‌ನಿಂದ ಹೊರಬಂದ ಬಳಿಕ ಬ್ರಿಟನ್‌ನ ರಫ್ತಿನ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬಿದ್ದಿದ್ದು, ಮುಂದೆ ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ. ಹಾಗಾಗಿ ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ಕೂಡ ಬ್ರಿಟನ್‌ಗೆ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!