ಉದಯವಾಹಿನಿ, ಮಾಸ್ಕೊ: ಈಗಾಗಲೇ ಭಾರತದಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಜಿ-೨೦ ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದ ರಷ್ಯಾ ಅಧ್ಯಕ್ಷ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ದೆಹಲಿಯ ಜಿ-೨೦ ಶೃಂಗಸಭೆಯಲ್ಲಿ ಪುಟಿನ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೂಡ ಮಾತನಾಡುವ ಯಾವುದೇ ಯೋಜನೆ ಇಲ್ಲ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಇದೀಗ ಬಹಿರಂಗ ಪಡಿಸಿದೆ.
ಉಕ್ರೇನ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಈಗಾಗಲೇ ರಷ್ಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗಿರುವ ಆರೋಪದಲ್ಲಿ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಜಾರಿಗೊಳಿಸಿದ ಬಳಿಕ ಅವರು ವಿದೇಶ ಪ್ರಯಾಣದಿಂದ ಹಿಂದೆ ಸರಿಯುತ್ತಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುವ ಜಿ೨೦ ಶೃಂಗಸಭೆಯಲ್ಲಿ ರಷ್ಯಾ ನಿಯೋಗದ ಅಧ್ಯಕ್ಷತೆಯನ್ನು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಪುಟಿನ್ ಅವರ ಹೇಳಿಕೆಯ ವೀಡಿಯೊ ಪ್ರಸಾರವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಷ್ಯಾ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ‘ಈ ರೀತಿಯ ಯೋಜನೆಯಿಲ್ಲ. ಎಲ್ಲಾ ಕಾರ್ಯಗಳೂ ಸಚಿವ ಲಾವ್ರೋವ್ ನೇತೃತ್ವದಲ್ಲಿ ನಡೆಯಲಿದೆ’ ಎಂದಿದ್ದಾರೆ. ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಸಭೆಯಲ್ಲೂ ಪುಟಿನ್ ಗೈರುಹಾಜರಿಯಲ್ಲಿ ರಷ್ಯಾ ನಿಯೋಗದ ಅಧ್ಯಕ್ಷತೆಯನ್ನು ಲಾವ್ರೋವ್ ವಹಿಸಿದ್ದರು. ಈ ಸಭೆಯ ಸಮಾರೋಪದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ್ದ ಪುಟಿನ್, ಉಕ್ರೇನ್ ಸಂಘರ್ಷಕ್ಕೆ ಪಾಶ್ಚಿಮಾತ್ಯ ದೇಶಗಳೇ ಕಾರಣ ಎಂದು ದೂಷಿಸಿದ್ದರು. ಆದರೆ ಜಿ-೨೦ಯಲ್ಲಿ ಬಹುತೇಕ ಯುರೋಪಿಯನ್ ದೇಶಗಳೇ ಇರುವ ಹಿನ್ನೆಲೆಯಲ್ಲಿ ಪುಟಿನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಮಾತನಾಡುವುದಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!