ಉದಯವಾಹಿನಿ, ಹನೂರು: ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ನಿರ್ಲಕ್ಷ ಕರ್ತವ್ಯದಿಂದ ಗುಂಡಲ್ ಜಲಾಶಯ ಅರಣ್ಯ ಪ್ರದೇಶದಿಂದ ಹತ್ತಿರ ತೋಟಕ್ಕೆ ರಾತ್ರಿ ಸಮಯದಲ್ಲಿ ಒಂಟಿ ಆನೆಯೊಂದು ದಾಳಿ ನಡೆಸಿ ತೋಟದಲ್ಲಿ ಬೆಳೆದಿರುವ ಬಾಳೆ ಗಿಡಗಳು, ತೆಂಗಿನ ಮರ ಸೇರದಂತೆ ಇನ್ನಿತರ ಬೆಳೆಗಳನ್ನು ನಾಶ ಮಾಡಿದ್ದು ರೈತ ಕಂಗಾಲಾಗಿ ಭಯ ಭೀತರಾಗಿದ್ದಾರೆ.
ಹನೂರು ತಾಲೂಕು ಸಮೀಪದ ಗುಂಡಲ್ ಜಲಾಶಯದ ಅರಣ್ಯ ಪ್ರದೇಶದಿಂದ ಹತ್ತಿರ ಕಂಚಗಳ್ಳಿ ಗ್ರಾಮದ ಪಕ್ಕದಲ್ಲಿರುವ ರುದ್ರಶೆಟ್ಟಿ ಬಿನ್ ಲೇಟ್ ಕೆಂಚಶೆಟ್ಟಿ ಎಂಬುವರ ತೋಟದ ಜಮೀನಿನಿಗೆ ರಾತ್ರಿ ಸಮಯದಲ್ಲಿ ಒಂಟಿ ಆನೆಯೊಂದು ದಾಳಿ ಮಾಡಿ ಸೋಲಾರ್ ತಂತಿ ಗೇಟ್ ಮುರಿದು ತೋಟದಲ್ಲಿನ ಬೆಳೆಗಳನ್ನು ನಾಶ ಮಾಡಿದೆ.
ರೈತ ರುದ್ರಶೆಟ್ಟಿ ಅವರ ತೋಟದ ಜಮೀನ ಸುತ್ತ ಅಳವಡಿಸಲಾಗಿರುವ ಸೋಲಾರ್ ತಂತಿ ಕಂಬಗಳನ್ನು ಹಾಗೂ ಗೇಟ್ ಕಂಬಗಳನ್ನು ಮುರಿದಿರುವ ಒಂಟಿ ಆನೆಯು ತೋಟದಲ್ಲಿ ಬೆಳೆದಿರುವ ತೆಂಗಿನ ಮರ, ಅಡಿಕೆ ಗಿಡಗಳು, ಹಲಸು, ಸೀಬೆ ಹಣ್ಣಿನ ಮರ, ಬಾಳೆ ಗಿಡಗಳನ್ನು ಮುರಿದು ಹಾಕಿ ಸಂಪೂರ್ಣ ನಾಶ ಮಾಡಿದ್ದು ಇದರಿಂದ ರೈತನಿಗೆ ಬಹಳಷ್ಟು ನಷ್ಟವಾಗಿದೆ. ಈ ಬಗ್ಗೆ ರೈತ ರುದ್ರಶೆಟ್ಟಿ ಮಾತನಾಡಿ ಕಳೆದ ಒಂದು ತಿಂಗಳಿಂದಲೂ ಒಂಟಿ ಆನೆ ಹಾವಳಿ ಹೆಚ್ಚಾಗಿದ್ದು ನಾಲ್ಕೈದು ದಿನಗಳಿಂದ ಒಂದು ದಿನ ಬಿಟ್ಟು ಮತ್ತೊಂದು ದಿನ ತಪ್ಪದೇ ಬರುತ್ತದೆ. ಅದೇ ರೀತಿ ರಾತ್ರಿ ವೇಳೆ ಆನೆ ಬಂದು ನಮ್ಮ ತೋಟದಲ್ಲಿನ ಬೆಳೆಗಳನ್ನು ನಾಶ ಮಾಡಿದೆ.
ಗುಂಡಾಲ್ ಜಲಾಶಯ ಕಾಡು ಹತ್ತಿರ ಇರುವುದರಿಂದ ಈ ಆನೆ ಯಾವಾಗಲೂ ಬರುತ್ತದೆ. ರಾತ್ರಿ ಕಾವಲಿನಲ್ಲಿ ಇರಲು ಪ್ರಾಣಭಯದಿಂದ ಇರಬೇಕಾದ ಪರಿಸ್ಥಿತಿ ನಮ್ಮದಾಗಿದೆ. ಈ ಭಾಗದಲ್ಲಿನ ರೈತರು ತಮ್ಮ ಜಮೀನುಗಳಿಗೆ ಕಾವಲು ಹೋಗಲು ಭಯಪಡಬೇಕಾದ ಪರಿಸ್ಥಿತಿಯಾಗಿದೆ. ಯಾವುದೇ ಸಮಯದಲ್ಲಾದರೂ ಆನೆ ಬರುತ್ತದೆ ಎಂಬ ಪ್ರಾಣಭಯ ಬಂದಿದೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳ ಗಮನಕ್ಕೆ ತಿಳಿಸಿದರು ಏನು ಪ್ರಯೋಜನವಿಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷದ ಬಗ್ಗೆ ಆರೋಪ ಮಾಡಿದ್ದಾರೆ.
