ಉದಯವಾಹಿನಿ, ಪಾಲ್ಗರ್: ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಿತಗೊಂಡ 43 ವರ್ಷದ ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿಯನ್ನು (ಲಿವ್-ಇನ್ ಪಾರ್ಟನರ್) ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಾಥಮಿಕ ತನಿಖೆ ವೇಳೆ ಕೊಲೆ ನಡೆದಿರುವ ಬಗ್ಗೆ ತಿಳಿದುಬಂದಿದ್ದು, 28 ವರ್ಷದ ಯುವತಿಯ ಶವವಿನ್ನು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ಆಗಸ್ಟ್ 14ರಂದು ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಕುಟುಂಬ ನೈಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶವವನ್ನು ಗುಜರಾತ್‌ನ ವಾಪಿ ಪಟ್ಟಣದಲ್ಲಿ ವಿಲೇವಾರಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ವಸಾಯಿಯ ಸಹಾಯಕ ಪೊಲೀಸ್ ಆಯುಕ್ತೆ ಪದ್ಮಜಾ ಬಡೆ ತಿಳಿಸಿದ್ದಾರೆ.
‘ಆರೋಪಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿ ದೂರು ದಾಖಲಿಸಿದ್ದಳು. ದೂರನ್ನು ಹಿಂಪಡೆಯುವಂತೆ ಆರೋಪಿಯು ಒತ್ತಾಯಿಸಿದ್ದು, ಯುವತಿಯು ಅದನ್ನು ನಿರಾಕರಿಸಿದ್ದಳು. ಆಕ್ರೋಶಿತನಾದ ಆರೋಪಿಯು ಯುವತಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಬಡೆ ತಿಳಿಸಿದ್ದಾರೆ.
