ಉದಯವಾಹಿನಿ, ಇಂಫಾಲ್ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊಸದಾಗಿ ಮತ್ತೆ ಹಿಂಸಾಚಾರ ನಡೆದಿದೆ. ಮಂಗಳವಾರ ಬೆಳಗ್ಗೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಆದಿವಾಸಿ ಜನಾಂಗದ ಮೂವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬುಡಕಟ್ಟು ಜನಾಂಗದ ಪ್ರಾಬಲ್ಯದ ಕಂಗ್ಗುಯಿ ಪ್ರದೇಶದ ಇರೆಂಗ್ ಮತ್ತು ಕರಮ್ ವೈಫೇಯ್ ಗ್ರಾಮಗಳ ನಡುವೆ ಹೊಂಚು ಹಾಕಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರ ಹತ್ಯೆಯ ಘಟನೆಯನ್ನು ಸಾಮಾಜಿಕ ಸಂಘಟನೆಯಾದ ಬುಡಕಟ್ಟು ಏಕತೆಯ ಸಮಿತಿ ತೀವ್ರವಾಗಿ ಖಂಡಿಸಿದೆ. “ಕೇಂದ್ರ ಸರ್ಕಾರವು ರಾಜ್ಯದಲ್ಲಿ ಸಹಜ ಸ್ಥಿತಿಯ ಮರುಸ್ಥಾಪನೆಗೆ ತನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿದರೆ, ತಕ್ಷಣವೇ ಎಲ್ಲ ಕಣಿವೆ ಜಿಲ್ಲೆಗಳನ್ನು ತೊಂದರೆಗೀಡಾದ ಪ್ರದೇಶಗಳೆಂದು ಘೋಷಿಸಬೇಕು. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958 ಅನ್ನು ಹೇರಬೇಕು ಎಂದು ಸಮಿತಿ ಹೇಳಿದೆ.
ಇದೇ ಸೆಪ್ಟೆಂಬರ್ 8ರಂದು ತೆಂಗ್ನೌಪಾಲ್ ಜಿಲ್ಲೆಯ ಪಲ್ಲೆಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದರು. ಅಲ್ಲದೇ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮೂವರು ಆದಿವಾಸಿಗಳು ಹತ್ಯೆಗೀಡಾಗಿದ್ದಾರೆ. ಮೇ 3ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದರಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.
