ಉದಯವಾಹಿನಿ, ಬೆಂಗಳೂರು: ಭಾರತದಲ್ಲಿ ಅಂತಾರಾಷ್ಟ್ರೀಯ ಶಿಕ್ಷಣದ ಮೇಲಿ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದರಲ್ಲೂ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ ಎಂದು ಆಸ್ಟ್ರೇಲಿಯಾ ಸರ್ಕಾರದ ವ್ಯಾಪಾರ ಮತ್ತು ಹೂಡಿಕೆ ಆಯುಕ್ತೆ ಡಾ.ಮೋನಿಕಾ ಕೆನಡಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ವೃತ್ತಿಜೀವನ ಉತ್ತಮವಾಗಿರುತ್ತದೆ ಎಂಬ ಭರವಸೆಯಲ್ಲಿ, ಒಳ್ಳೆಯ ಶಿಕ್ಷಣದ ಪಡೆಯುವ ಇಂಗಿತದಲ್ಲಿಯೂ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಓದುವ ತಮ್ಮ ಗುರಿಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಂತೆ ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆಯುತ್ತಿರುವ ಸಂಖ್ಯೆ ಅಧಿಕವಾಗಿದೆ ಎಂದರು.
ಆಸ್ಟ್ರೇಲಿಯಾ ಆದ್ಯತೆಯ ಅಧ್ಯಯನ ತಾಣವಾಗಿ ಹೊರಹೊಮ್ಮಿದ್ದು, ೨೦೨೩ರಲ್ಲಿ ದಾಖಲೆ ಸಂಖ್ಯೆಯಲ್ಲಿ ಅಂದರೆ ೯೮,೦೦೦ ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಜತೆಗೆ, ಆಸ್ಟ್ರೇಲಿಯಾ ತನ್ನ ಸಂಶೋಧನಾ ಶ್ರೇಷ್ಠತೆ, ಉದ್ಯೋಗದ ಫಲಿತಾಂಶಗಳಿಗಾಗಿ ಜಾಗತಿಕ ಶ್ರೇಯಾಂಕಗಳಲ್ಲಿ ಸ್ಥಿರವಾಗಿ ಗುರುತಿಸಲ್ಪಟ್ಟಿದೆ ಎಂದು ವಿವರಿಸಿದರು.
