ಉದಯವಾಹಿನಿ, ಬೀನಾ (ಮಧ್ಯಪ್ರದೇಶ): ವಿಪಕ್ಷಗಳ ಮೈತ್ರಿಕೂಟವನ್ನು ‘ಘಮಂಡಿಯಾ’ ಕೂಟ ಎಂದು ಮತ್ತೊಮ್ಮೆ ಜರಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಸನಾತನ ಧರ್ಮವನ್ನು ನಾಶ ಮಾಡಿ, ದೇಶವನ್ನು ಸಾವಿರಾರು ವರ್ಷಗಳ ಗುಲಾಮಗಿರಿಗೆ ನೂಕಲು ‘ಇಂಡಿಯಾ’ ಹವಣಿಸುತ್ತಿದೆ’ ಎಂದು ಗುರುವಾರ ವಾಗ್ದಾಳಿ ನಡೆಸಿದ್ದಾರೆ.ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ, ಅಹಲ್ಯಾಬಾಯಿ ಹೋಳ್ಕರ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಹೆಸರು ಪ್ರಸ್ತಾಪಿಸಿದ ಮೋದಿ, ‘ಈ ಎಲ್ಲ ಮಹಾನ್ ವ್ಯಕ್ತಿಗಳು ಕೂಡ ಸನಾತನ ಧರ್ಮದಿಂದ ಪ್ರೇರಣೆ ಪಡೆದಿದ್ದರು’ ಎಂದು ಹೇಳಿದ್ದಾರೆ.’ಮುಂಬೈನಲ್ಲಿ ಸಭೆ ಸೇರಿದ್ದ ‘ಇಂಡಿಯಾ’ ಮೈತ್ರಿಕೂಟಕ್ಕೆ ಯಾವುದೇ ನೀತಿಗಳು, ವಿಷಯಗಳು ಅಥವಾ ನಾಯಕ ಇರಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ನಡೆಸಿ, ಅದನ್ನು ನಾಶ ಮಾಡುವುದೇ ಅದರ ರಹಸ್ಯ ಕಾರ್ಯಸೂಚಿಯಾಗಿದೆ’ ಎಂದು ಹೇಳಿದ್ದಾರೆ.ಸಾಗರ್ ಜಿಲ್ಲೆಯ ಬೀನಾದಲ್ಲಿರುವ ರಿಫೈನರಿಯಲ್ಲಿ ಪೆಟ್ರೊಕೆಮಿಕಲ್ಸ್ ಸಂಕೀರ್ಣ ಹಾಗೂ ಇತರ ಹತ್ತು ಉದ್ಯಮಗಳು ಸೇರಿದಂತೆ ₹ 49 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧಿ ಅವರು ಸನಾತನ ಧರ್ಮದಿಂದಲೇ ಸ್ಫೂರ್ತಿ ಪಡೆದಿದ್ದರು. ಅವರು ಕೈಗೊಂಡಿದ್ದ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು ಕೂಡ ಸನಾತನ ಧರ್ಮವೇ ಆಗಿತ್ತು. ಅವರು ತಮ್ಮ ಬದುಕಿನುದ್ದಕ್ಕೂ ಸನಾತನ ಧರ್ಮವನ್ನೇ ಪಾಲಿಸುತ್ತಿದ್ದರು.
