ಉದಯವಾಹಿನಿ, ನವದೆಹಲಿ : ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ೪೧೭ ಕೋಟಿ ರೂ ಮೌಲ್ಯದ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾ, ಭೋಪಾಲ್ ಹಾಗೂ ಮುಂಬೈ ನಗರಗಳಲ್ಲಿ ಮಹದೇವ್ ಆಪ್‌ನೊಂದಿಗೆ ಸಂಪರ್ಕ ಹೊಂದಿದ್ದ ಅಕ್ರಮ ಹಣ ವರ್ಗಾವಣೆ ಜಾಲದ ವಿರುದ್ಧ ವ್ಯಾಪಕ ಶೋಧ ಕೈಗೊಂಡು ಭಾರಿ ಪ್ರಮಾಣದ ನಗದು, ಆಭರಣ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮಹದೇವ್ ಆಪ್ ದುಬೈನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಉಳಿದಂತೆ, ಈ ಆಪ್ ಶೇ. ೭೦-೩೦ ರಷ್ಟು ಲಾಭದ ಅನುಪಾತದಲ್ಲಿ ಸಹವರ್ತಿಗಳಿಗೆ ಫ್ರಾಂಚೈಸಿಂಗ್ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ನಿರ್ಮಿಸಿದ ಈ ಕಂಪನಿಯು ಹೊಸ ಬಳಕೆದಾರರನ್ನು ಆಪ್‌ಗೆ ಸೇರಿಸಲು ಮತ್ತು ಅನಾಮಧೇಯ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಲು ಆನ್‌ಲೈನ್ ಬುಕ್ ಬೆಟ್ಟಿಂಗ್ ಆಪ್ ಬಳಸುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬೆಟ್ಟಿಂಗ್ ಹಣವನ್ನು ವಿದೇಶಿ ಖಾತೆಗಳಿಗೆ ವಾರ್ಗಾಯಿಸಲು ಹವಾಲ ಕಾರ್ಯಾಚರಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದೆ.
