ಉದಯವಾಹಿನಿ , ಚೆನ್ನೈ: ತಮಿಳುನಾಡಿನಲ್ಲಿ ಮೂರು ಲೋಕಸಭೆ ಚುನಾವಣೆ ಜೊತೆಯಾಗಿ ಎದುರಿಸಿದ್ದ ಎಐಎಡಿಎಂಕೆ , ಬಿಜೆಪಿ ಜೊತೆಗಿನ ಮೈತ್ರಿ ಕಡಿತ ಮಾಡಿಕೊಂಡಿದೆ. ಹೀಗಾಗಿ ಬಿಜೆಪಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.
೧೯೯೮, ೨೦೦೪ ಮತ್ತು ೨೦೧೯ ರಲ್ಲಿ ಎರಡೂ ಪಕ್ಷಗಳು ಜೊತೆಯಾಗಿ ಲೋಕಸಭಾ ಚುನಾವಣೆ ಎದುರಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಅಣ್ಣಾ ದೊರೈ ಕುರಿತು ನೀಡಿದ ಹೇಳಿಕೆ ಎರಡೂ ಪಕ್ಷಗಳ ಸಂಬಂಧ ಕಡಿತ ಮಾಡಿಕೊಳ್ಳುವ ಹಂತಕ್ಕೆ ಬಂದಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರು ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದೊಂದಿಗಿನ ಮೈತ್ರಿ ಮುರಿಯಲು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನಿರ್ಧಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕತ್ವ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡಲಿದೆ ಎಂದಿದ್ದಾರೆ.
ಬಿಜೆಪಿಯ ಮತ್ತೋರ್ವ ಮುಖಂಡ ಸಿ.ಟಿ.ರವಿ ಮಾತನಾಡಿ, ಲೋಕಸಭೆ ಚುನಾವಣೆಗೆ ಎಂಟು ತಿಂಗಳು ಬಾಕಿ ಉಳಿದಿದ್ದು, ಈ ತಿಂಗಳಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಪಕ್ಷ ಬಲಿಷ್ಠಗೊಳಿಸುವುದು ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯವಾಗಿದೆ. ಕೆ.ಅಣ್ಣಾಮಲೈ ಅವರ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
