ಉದಯವಾಹಿನಿ, ಶಿವಮೊಗ್ಗ: ಅವ್ಯಾಚ್ಯ ಶಬ್ದ ಪ್ರಯೋಗಿಸಿದನಾಗರೀಕ ರೋರ್ವರ ಮಾತಿಗೆ ಸಿಡಿಮಿಡಿಗೊಂಡ ಶಾಸಕ ಚನ್ನಬಸಪ್ಪರವರು, ರಸ್ತೆಯಲ್ಲಿಯೇ ಮಾತಿನ ಚಕಮಕಿ ನಡೆಸಿ ಜಗಳಕ್ಕಿಳಿದ ಘಟನೆ, ಶಿವಮೊಗ್ಗ ಮಹಾನಗರ ಪಾಲಿಕೆ ೫ ನೇ ವಾರ್ಡ್ ಪುರಲೆಯಲ್ಲಿ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುರಲೆ ಬಡಾವಣೆಗೆ ಶಾಸಕರು ಆಗಮಿಸಿದ್ದರು. ಈ ವೇಳೆ ಸ್ಥಳೀಯ ನಿವಾಸಿಗಳು ಏರಿಯಾದಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿಗಳ ಸ್ವಚ್ಛತೆಯಿಲ್ಲ.
ಯುಜಿಡಿ ಅವ್ಯವಸ್ಥೆಯಿದೆ ಎಂಬಿತ್ಯಾದಿ ದೂರುಗಳ ಸರಮಾಲೆಯನ್ನೇ ಶಾಸಕರ ಮುಂದಿಟ್ಟಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಆದ ಮೇಯರ್ ಶಿವಕುಮಾರ್ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶಾಸಕರ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಗಳ ವೀಕ್ಷಣೆಗೆ ಶಾಸಕರು ನಿವಾಸಿಗಳ ಜೊತೆ ಹೋಗುತ್ತಿದ್ದ ವೇಳೆ, ವ್ಯಕ್ತಿಯೋರ್ವರು ಅವ್ಯಾಚ್ಯ ಶಬ್ದ ಪ್ರಯೋಗ ಮಾಡಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಇದರಿಂದ ಸಿಟ್ಟಾದ ಶಾಸಕರು, ಏರು ಧ್ವನಿಯಲ್ಲಿ ಸದರಿ ವ್ಯಕ್ತಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ‘ನನ್ನ ಹತ್ತಿರ ಸರಿಯಾಗಿ ಮಾತನಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಗರಂ ಆಗಿದ್ದಾರೆ.
ಸದರಿ ವ್ಯಕ್ತಿಯು ಕೂಡ ಶಾಸಕರ ಜೊತೆ ಏರು ಧ್ವನಿಯಲ್ಲಿ ಪ್ರತ್ಯುತ್ತರ ನೀಡಲಾರಂಭಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಇದರಿಂದ ಸ್ಥಳದಲ್ಲಿ ಕೆಲ ಸಮಯ ಕಾವೇರಿದ ವಾತಾವರಣ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *

error: Content is protected !!