ಉದಯವಾಹಿನಿ, ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಬದುಕು ಹಾಗೂ ಮೌಲ್ಯಗಳು ನಮಗೆ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಹಾತ್ಮ ಗಾಂಧೀಜಿ ಯವರ 154 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 119 ನೇ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ದೇಶಾದ್ಯಂತ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಯವರಿಗೆ ನಾವು ನಮನ ಸಲ್ಲಿಸಿದ್ದೇವೆ. ಅವರ ಹೋರಾಟದ ಬದುಕು ನಮ್ಮೆಲ್ಲರಿಗೂ ಸ್ಪೋರ್ತಿಯಾಗಲಿ ಎಂದು ಹಾರೈಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ. ಜೀವನದ್ದುದ್ದಕ್ಕೂ ಪ್ರಾಮಾಣಿಕವಾಗಿ ಬದುಕಿದವರು. ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯ ನಮ್ಮೆಲ್ಲರಿಗೂ ದಾರಿದೀಪ. ಗಾಂಧೀಜಿ ಯವರು ಸರಳ ಜೀವನ ನಡೆಸಿದವರು. ಅಹಿಂಸಾ ಮಾರ್ಗ ಅನುಸರಿಸಿ, ಅಹಿಂಸಾತ್ಮಕ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಂತೆ ಸರಳವಾಗಿ ಬದುಕಲು ಪ್ರಯತ್ನಿಸಿದರು ಎಂದರು.
ಮೂರನೇ ದರ್ಜೆ ಬೋಗಿಯಲ್ಲಿ ಯಾವಾಗಲೂ ಪ್ರಯಾಣಿಸುತ್ತಿದ್ದರು. ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, 3 ನೇ ದರ್ಜೆಗಿಂತಲೂ ಕೆಳ ದರ್ಜೆಯ ಬೋಗಿ ಇಲ್ಲವಾದ್ದರಿಂದ ನಾನು 3 ನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಉತ್ತರಿಸಿದರು. ಅಷ್ಟರ ಮಟ್ಟಿಗೆ ಸರಳವಾಗಿ ಬದುಕಿದ ಅವರು ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡವರು ಎಂದು ಹೇಳಿದರು.
ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಸೆರೆಮನೆ ವಾಸ ಅನುಭವಿಸಿದ್ದರು. ಭಾರತದಲ್ಲಿಯೂ ಸೆರೆಮನೆಯ ವಾಸ ಅನುಭವಿಸಿ ದೇಶಕ್ಕೆ ಮಾದರಿಯಾಗಿದ್ದರು. ಅವರ ನೇತೃತ್ವದಲ್ಲಿ ಅನೇಕ ಜನರು ತ್ಯಾಗ, ಬಲಿದಾನಗಳನ್ನು ಅರ್ಪಿಸಿದರು. ಅಂತಿಮವಾಗಿ ಮತಾಂಧ ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು ಎಂದು ಸ್ಮರಿಸಿದರು.

 

Leave a Reply

Your email address will not be published. Required fields are marked *

error: Content is protected !!