ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಇನ್ನೊಂದು ವಾರ ಕಾಲ ಒಣಹವೆ ಮುಂದುವರೆಯಲಿದ್ದು, ಮಳೆ ಬರುವ ಸಾಧ್ಯತೆಗಳು ಕಡಿಮೆ. ಕಳೆದ ಒಂದು ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗುವ ಆಶಾಭಾವನೆ ಮೂಡಿಸಿತ್ತು. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಸದ್ಯಕ್ಕೆ ಮಳೆ ಬರುವಂತಹ ಯಾವುದೇ ರೀತಿಯ ಬದಲಾವಣೆಗಳು ಕಂಡುಬರುತ್ತಿಲ್ಲ. ಹೀಗಾಗಿ ಇನ್ನು ಒಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ತೀರ ವಿರಳ ಎಂದು ಹವಾಮಾನ ತಜ್ಞರು ತಿಳಿಸಿದರು.
ವಾರದ ನಂತರ ಒಂದೆರಡು ದಿನ ಮಳೆಯಾಗುವ ಮುನ್ಸೂಚನೆಗಳಿವೆ. ಸದ್ಯಕ್ಕೆ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಒಂದೆರಡು ಕಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಆಗಸ್ಟ್, ಸೆಪ್ಟೆಂಬರ್‍ನಂತೆ ಅಕ್ಟೋಬರ್‍ನಲ್ಲೂ ಮಳೆ ಕೊರತೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆ.26ರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.65, ಉತ್ತರ ಒಳನಾಡಿನಲ್ಲಿ ಶೇ.42ರಷ್ಟು ಮಳೆ ಕೊರತೆಯಾಗಿದ್ದರೆ, ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹಾಗೂ ಕರಾವಳಿಯಲ್ಲಿ ಶೇ.130ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ ವಾಡಿಕೆಗಿಂತ ಶೇ.17ರಷ್ಟು ಕಡಿಮೆ ಮಳೆಯಾದ ವರದಿಯಾಗಿದೆ. ಮಲೆನಾಡು ಭಾಗದಲ್ಲಿ ವಾಡಿಕೆ ಪ್ರಮಾಣದ ಮಳೆಯಾದ ಹಿನ್ನಲೆಯಲ್ಲಿ ಪ್ರಮುಖ ಜಲಾಶಯಗಳ ಒಳಹರಿವು ಸ್ವಲ್ಪ ಹೆಚ್ಚಳವಾಗಿತ್ತು.
ನಿನ್ನೆಯ ಮಾಹಿತಿ ಪ್ರಕಾರ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ವರಾಹಿ ಹಾಗೂ ಸೂಪಾ ಜಲಾಶಯಗಳಿಗೆ ಒಟ್ಟಾರೆ 22933 ಕ್ಯೂಸೆಕ್ಸ್‍ನಷ್ಟು ಒಳಹರಿವಿತ್ತು. ಕಾವೇರಿ ಕೊಳ್ಳದ ಹಾರಂಗಿ-3000, ಹೇಮಾವತಿ-8900, ಕೆಆರ್‍ಎಸ್- 5800 ಹಾಗೂ ಕಬಿನಿ ಜಲಾಶಯಕ್ಕೆ 8000 ಕ್ಯೂಸೆಕ್‍ಗೂ ಹೆಚ್ಚು ಒಳಹರಿವು ಇತ್ತು.
