ಉದಯವಾಹಿನಿ, ಬೆಂಗಳೂರು:  ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂದೇ ಹೇಳಲಾಗುತ್ತಿರುವ ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಡ ಕೇಳಿಬರುತ್ತಿದೆ. ಜಾತಿ ಜನಗಣತಿ ವರದಿಗೆ ಆದಷ್ಟು ಬೇಗ ಸಮ್ಮತಿ ಸೂಚಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೂ ಕೂಡಾ ಈ ಪ್ರಕ್ರಿಯೆ ಕೊಂಚ ತಡವಾಗುವ ಸಾಧ್ಯತೆಗಳಿವೆ. ಕಾಂತರಾಜ್ ಆಯೋಗ ಸಿದ್ದಪಡಿಸಿದ್ದ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸರ್ವೆ ವರದಿ ಸಿದ್ದಗೊಂಡು ಈಗಾಗಲೇ 5 ವರ್ಷದ ಮೇಲಾಗಿದೆ. ಸದ್ಯ ಈ ವರದಿ ಇನ್ನೂ ಬಹಿರಂಗವಾಗದೆ ಕಡತಗಳು ಧೂಳು ತಿನ್ನುತ್ತಿವೆ.ಪ್ರಬಲ ಸಮುದಾಯಗಳು ಈ ವರದಿ ಬಿಡುಗಡೆಗೆ ತೀವ್ರವಾಗಿ ವಿರೋಧವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವುದರಿಂದ ಜೇನುಗೂಡಿನಂತಿರುವ ಜಾತಿ ಜನಗಣತಿ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈ ಹಾಕಲಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಅತ್ತ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿದ್ದ ವರದಿ ಬಿಡುಗಡೆಗೆ ಸಿದ್ಧವಾಗಿ ಹಲವಾರು ವರ್ಷಗಳೇ ಆಗಿದ್ದರೂ ರಾಜಕೀಯ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!