ಉದಯವಾಹಿನಿ, ಹರಿದ್ವಾರ : ರಷ್ಯಾದ ಮೂರು ಜೋಡಿಗಳು ಬುಧವಾರ ಧಾರ್ಮಿಕ ನಗರ ಹರಿದ್ವಾರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಲಾರಿಸಾ ಯುರಾ, ಎಲ್ಸಿ ರುಶಾಲಂ ಮತ್ತು ವಿಕ್ಟೋರಿಯಾ ಮ್ಯಾಟ್ವೆಯೊಂದಿಗೆ ವೈದಿಕ ಸಂಪ್ರದಾಯದಂತೆ ವಿವಾಹವಾದರು.
ಅಖಂಡ ಪರಮಧಾಮ ಆಶ್ರಮದಲ್ಲಿ, ಮೂವರು ರಷ್ಯನ್ ಪ್ರಜೆಗಳು ಭಾರತೀಯ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದರು. ೫೦ ರಷ್ಯನ್ನರು ಆಧ್ಯಾತ್ಮಿಕ ಪ್ರಯಾಣಕ್ಕಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ಸಂಸ್ಕೃತಿಯು ರಷ್ಯಾದ ಪ್ರವಾಸಿಗರನ್ನು ಸೆಳೆಯುತ್ತಿದೆ. ೫೦ ರಷ್ಯನ್ನರಲ್ಲಿ ಮೂರು ಜೋಡಿಗಳು ಭಾರತದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಮೂರು ಜೋಡಿಗಳು ಆಶ್ರಮದಲ್ಲಿ ಉಳಿದು ಭಾರತೀಯ ಸಂಪ್ರದಾಯದಂತೆ ವಿಧಿವಿಧಾನಗಳೊಂದಿಗೆ ವಿವಾಹವಾದರು.ವೇದ ಮಂತ್ರಗಳ ನಡುವೆ ಏಳು ಸುತ್ತು ಹಾಕಿದರು. ಬಳಿಕ ಪೂಜ್ಯರ ಆಶೀರ್ವಾದ ಪಡೆದರು.
ವಿವಾಹ ಸಮಾರಂಭದಲ್ಲಿ ವರರು ಭಾರತೀಯ ಸಂಪ್ರದಾಯದ ಶೆರ್ವಾನಿ ಧರಿಸಿದ್ದರೆ, ವಧು ಭಾರತೀಯ ಪದ್ಧತಿಯ ಲೆಹೆಂಗಾದಲ್ಲಿ ಮಿಂಚಿದರು. ಈ ಹಿಂದೆಯೂ ಅನೇಕ ರಷ್ಯನ್ ಪ್ರಜೆಗಳು ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ ಎಂದು ರಷ್ಯಾ ನಾಗರಿಕರು ತಿಳಿಸಿದ್ದಾರೆ. ಹಲವು ವರ್ಷ ಕಳೆದಿದ್ದು, ಪರಸ್ಪರ ಪ್ರೀತಿ, ವಿಶ್ವಾಸ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡರು. ಈ ಮದುವೆ ಕಾರ್ಯಕ್ರಮದಲ್ಲೂ ಕೊನೆವರೆಗೆ ಪರಸ್ಪರರ ಕಷ್ಟ ಸುಖದಲ್ಲಿ ಭಾಗಿ ಆಗುತ್ತೇವೆಂದು ನವಜೋಡಿಗಳು ಪ್ರತಿಜ್ಞೆ ಮಾಡಿದ್ದಾರೆ.
ವಿವಾಹದ ಅತಿಥಿಗಳಾಗಿ ಸಂತರು ಆಗಮಿಸಿ ದಂಪತಿಗಳನ್ನು ಆಶೀರ್ವದಿಸಿದರು. ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತೀಯ ಸಂತ ಸಂಪರ್ಕ ಮುಖ್ಯಸ್ಥ ಅಶೋಕ್ ತಿವಾರಿ, ಶ್ರೀಗಂಗಾ ಸಭಾದ ಅಧ್ಯಕ್ಷ ನಿತಿನ್ ಗೌತಮ್, ಜಿಲ್ಲಾ ಧರ್ಮಾಚಾರ್ಯ ಸಂಪರ್ಕ ಮುಖ್ಯಸ್ಥ ಮಯಾಂಕ್ ಚೌಹಾಣ್, ಬಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ವಿಕಾಸ್ ಪ್ರಧಾನ್ ಸೇರಿದಂತೆ ಅಪಾರ ಸಂಖ್ಯೆಯ ಸಂತರು ವಿವಾಹದಲ್ಲಿ ಪಾಲ್ಗೊಂಡಿದ್ದರು.
